ರಿಪ್ಪನ್‌ಪೇಟೆ ; ಗಿಡ-ಗಂಟಿಗಳಿಂದ ಮುಚ್ಚಿ ಹೋಗಿರುವ ಸರ್ಕಾರದ ತೆರೆದ ಬಾವಿಗೆ ಸರಿಯಾದ ಕೈಪಿಡಿ ಇಲ್ಲದೆ ಅವಘಡಕ್ಕೆ ಆಹ್ವಾನಿಸುವಂತಾಗಿರುವ ಬಾವಿಯೊಂದರ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಸ್ಥಳೀಯ ಗ್ರಾಮಾಡಳಿತಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿಗೆ ದೂರು ನೀಡಲಾದರೂ ಕೂಡಾ ಗಮನಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಮಳೂರು ಗ್ರಾಮಸ್ಥರು ಆರೋಪಿಸಿದ್ದಾರೆ.
ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಳೂರು ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸಾರ್ವಜನಿಕರ ಬಳಕೆಗಾಗಿ ತೆಗೆಯಲಾದ ಸರ್ಕಾರದ ತೆರೆದ ಬಾವಿಗೆ ಕೈಪಿಡಿ ಇಲ್ಲದೆ ಇದ್ದು ಈಗ ಗಿಡ-ಗಂಟಿಗಳಿಂದ ಮುಚ್ಚಿ ಹೋಗಿ ಬಾವಿ ಎಲ್ಲಿದೆ ಎಂದು ಹುಡುಕುವಂತಾಗಿದೆ.
ಮೇಯಲು ಹೋದ ಜಾನುವಾರುಗಳು ಗಿಡ-ಗಂಟಿಗಳಿಂದ ಮುಚ್ಚಿ ಹೋಗಿರುವ ಈ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದರೆ ಯಾರು ಹೊಣೆ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ. ಅಲ್ಲದೆ ಜಾನುವಾರು ಬಂದಿಲ್ಲ ಎಂದು ರೈತರು ಹುಡುಕಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದರೆ ಗತಿ ಏನು? ಎಂದು ಸಹ ತಮ್ಮ ಮನದಾಳದ ನೋವಯನ್ನು ಮಾಧ್ಯಮದವರ ಬಳಿ ತೊಡಿಕೊಂಡಿದ್ದಾರೆ.

ಈ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮಳೂರು ಗ್ರಾಮಸ್ಥರು ದೂರು ಸಲ್ಲಿಸಿದರೂ ಕೂಡಾ ಗಮನಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾರೆಂದು ರೈತರು ಹಾಗೂ ಸ್ಥಳೀಯರು ಆರೋಪಿಸಿ ತಾಲ್ಲೂಕು ಪಂಚಾಯಿತ್ ಇಒರಿಗೆ ದೂರು ನೀಡಿರುವುದಾಗಿ ತಿಳಿಸಿದರು. ಆದರೂ ಏನು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಮಾಧ್ಯಮದವರ ಬಳಿ ನೋವಿನಿಂದ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಇನ್ನಾದರೂ ಸಂಬಂಧಿಸಿದ ಇಲಾಖೆಯವರು ಹಾಗೂ ಸ್ಥಳೀಯಾಡಳಿತ ತುರ್ತು ಗಮನಹರಿಸಿ ಮುಂದೆ ಅವಘಡಗಳು ಸಂಭವಿಸುವ ಮುನ್ನವೇ ಜಾಗೃತಿ ವಹಿಸುವ ಮೂಲಕ ಕ್ರಮ ಜರುಗಿಸಲು ಮುಂದಾಗುವರೆ ಎಂದು ಕಾದುನೋಡಬೇಕಾಗಿದೆ.







