ಹೊಸನಗರ ; ಸಮಾಜಮುಖಿ ಚಿಂತನೆಗಳ ಮೂಲಕ ಸತ್ಕಾರ್ಯ ಮಾಡಿದಾಗ ಮಾತ್ರ ಅದರ ಪ್ರತಿಫಲ ಯಶಸ್ಸಿನ ಮೂಲಕ ಕಾಣಬಹುದು ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಕರೆ ನೀಡಿದರು.
ಅವರು ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಸರ್ವ ಧರ್ಮ ಸೌಹಾರ್ದ ಟ್ರಸ್ಟ್‌ನ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸತ್ಕಾರ್ಯಗಳನ್ನು ಗುರುತಿಸಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಅದರ ಪ್ರತಿಫಲವನ್ನು ಯಶಸ್ಸಿನ ಮೂಲಕ ಕಾಣಬಹುದು ಎಂದು ಅವರು ನುಡಿದರು.
ಸರ್ವ ಧರ್ಮ ಸೌಹಾರ್ದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜಯರಾಮಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷ ಆನೆಗದ್ದೆ ಪ್ರಕಾಶ್ ಜನಜಾಗ್ರತಿ ಯೋಜನೆ ನಿರ್ದೇಶಕ ಎನ್.ಆರ್ ದೇವಾನಂದ್, ನಗರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುಧಾಕರ್ ಜಿ, ಪಟ್ಟಣ ಪಂಚಾಯತಿ ಮಾಜಿ ಸದಸ್ಯೆ ಕೃಷ್ಣವೇಣಿ, ಟ್ರಸ್ಟ್‌ನ ಉಪಾಧ್ಯಕ್ಷ ಆನೆಗದ್ದೆ ಆನಂದಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಆರ್ ಶೈಲಜಾ, ಡಾ. ಶ್ವೇತ ಜಿ.ಎನ್ ಆಚಾರ್ಯ, ಉಮೇಶ್ ಕಂಚುಗಾರ್ ಮೊದಲಾದರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಟ್ರಸ್ಟ್‌ನ ಸಮಾಜಮುಖಿ ಕಾರ್ಯಕ್ಕೆ ಯಶ ಕೋರಿದರು.

ಅಂಜಲಿ ಪ್ರಾರ್ಥಿಸಿದರು. ಕಾರ್ಯದರ್ಶಿ ಹಾರೆಬೈಲು ಅಶೋಕ್ ಸ್ವಾಗತಿಸಿ, ವರದಿ ವಾಚನ ಮಾಡಿದರು. ಬೈಸೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದ್ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವ ಅಂಗವಾಗಿ ಶಿವಮೊಗ್ಗ ಮೆಗ್ಗಾನ್ ಬೋಧಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದರವರಿಂದ ರಕ್ತದಾನ ಶಿಬಿರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದವರಿಂದ ಸಿರಿ ಸಿಂಗಾರಿ ಯಕ್ಷಗಾನ ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದೇಶದಲ್ಲಿ ಪುರಸ್ಕರಿಸಲಾಯಿತು.







