ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿ ; ನೇರ್ಲೆ ರಮೇಶ್

By malnad tech

Published on:

Spread the love

ಹೊಸನಗರ : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿ ಆಗಲಿದೆ ಎಂದು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್.ಪ್ರವೀಣ್ ತಿಳಿಸಿದರು.

ರಾಷ್ಟ್ರ ಪಿತ ಮಹಾತ್ಮ ಗಾಂಧಿ ಹಾಗು ಮಾಜಿ ಪ್ರಧಾನಿ ಶಾಸ್ತ್ರೀ ಅವರ ಜಯಂತಿ ದಿನದಂದು ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.

ಡಿಜಿಟಲ್ ಕೌಶಲ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೇರ್ಲೆ ರಮೇಶ್ ಮಾತನಾಡಿ, ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಅವರಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇದು ಹೆಚ್ಚು ಸಹಕಾರಿ ಎಂದರು.

ಸಂಘದ ಗೌರವಾಧ್ಯಕ್ಷ ಎಂ.ಪಿ.ಲೋಕೇಶ್ವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿವೆ. ಶಾಲೆಯಲ್ಲಿ ಕಲಿತ ಸಾವಿರಾರು ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಎಲ್ಲರೂ ಒಟ್ಟಾಗಿ ಸಹಾಯ ನೀಡಿದಲ್ಲಿ ಶಾಲಾಭಿವೃದ್ದಿ ಸಾಧ್ಯವೆಂದರು.

ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರ ಶೇಟ್, ಮಾಜಿ ಅಧ್ಯಕ್ಷ ಓಂಕೇಶಪ್ಪ ಗೌಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷ ದುಗ್ಗಪ್ಪ,  ಹಿರಿಯ ವಿದ್ಯಾರ್ಥಿಗಳ ಸಂಘದ ಗೌರಾವಧ್ಯಕ್ಷರಾದ ಬಸಪ್ಪಗೌಡ, ಎಂ.ಪಿ.ಲೋಕೇಶ್ವರ, ಟಾಕಪ್ಪ, ಖಜಾಂಚಿ ವಕೀಲ ಮಂಡಾನಿ ಗುರುಮೂರ್ತಿ, ಮುಖ್ಯ ಶಿಕ್ಷಕ ವೀರೇಶ್, ಸಹ ಶಿಕ್ಷಕಿ ಶುಭ, ದೇವಿಕಾ ಪ್ರಮುಖರಾದ ಮಂಡಾನಿ ದಿನೇಶ್, ಸಚಿನ್, ಮಹೇಶ್ ಮುದ್ದೋಡಿ, ದಿವಾಕರ್ ಮಂಡಾನಿ ಎಸ್ ಡಿ ಎಂ ಸಿ ಸದಸ್ಯ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕ್ಷೇತ್ರದ ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

Leave a comment