ನಾಡಗೀತೆಗೆ 100 – ವಂದೇ ಮಾತರಂಗೆ 150 ವರ್ಷ | ಫೆ. 16ರಂದು ಎಸ್.ವಿ.ಎಂ. ಗುರುಕುಲ ಬಟ್ಟೆಮಲ್ಲಪ್ಪದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗೀತಗಾಯನ ಸ್ಪರ್ಧೆ

By malnad tech

Published on:

Spread the love

ಹೊಸನಗರ ; ಇಲ್ಲಿನ ಶ್ರೀ ವ್ಯಾಸಮಹರ್ಷಿ ಗುರುಕುಲದ ಷೋಡಶೀಯ ಪ್ರದರ್ಶಿನಿ ಸಂಭ್ರಮೋತ್ಸವದ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತಾಲ್ಲೂಕು ಮಟ್ಟದ ನಾಡಗೀತೆ ಮತ್ತು ವಂದೇಮಾತರಂ ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನಾಡಗೀತೆಗೆ ನೂರು ವರ್ಷ ಹಾಗೂ ವಂದೇಮಾತರಂಗೆ ನೂರೈವತ್ತು ವರ್ಷ ತುಂಬಿದ ಅಮೃತ ಘಳಿಗೆಯ ಸವಿನೆನಪಿಗೆ ಈ ಸ್ಪರ್ಧೆ ಏರ್ಪಡಿಸಿದ್ದು, ಫೆ. 16ರ ಸೋಮವಾರ ಬೆಳಿಗ್ಗೆ 10ಕ್ಕೆ ಶ್ರೀ ವ್ಯಾಸ ಮಹರ್ಷಿ ಗುರುಕುಲ ಆವರಣದಲ್ಲಿನ ಎರಡು ವೇದಿಕೆಗಳಲ್ಲಿ ಸ್ಪರ್ಧೆ ಆರಂಭವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅನಿಮಿಷ ಚಿತ್ರಶಾಲೆ ಬೆಂಗಳೂರು, ಅಖಿಲ ಕರ್ನಾಟಕ ಕುವೆಂಪು ಕ್ರಿಯಾ ವೇದಿಕೆ ಬೆಂಗಳೂರು, ಸಾರ ಸಂಸ್ಥೆ ದೊಂಬೆಕೊಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಬಟ್ಟೆಮಲ್ಲಪ್ಪ-ಆಲಗೇರಿಮಂಡ್ರಿ, ರೋಟರಿ ಕ್ಲಬ್ ರಿಪ್ಪನ್‌ಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧೆ ನಡೆಯಲಿದೆ.

ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ ಒಂದೇ ವಿಭಾಗದಲ್ಲಿ ಸ್ಪರ್ಧೆ ಮಾಡಬೇಕಿದೆ. ಪ್ರೌಢ ಶಾಲೆ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ಶಾಲೆಯಿಂದ ಕನಿಷ್ಠ 6, ಗರಿಷ್ಠ 8 ವಿದ್ಯಾರ್ಥಿಗಳ ಒಂದು ತಂಡದಂತೆ ಎರಡೂ ಗೀತೆಗಳನ್ನು ಹಾಡಬಹುದಾಗಿದೆ. ಅವಶ್ಯಕತೆ ಇದ್ದಲ್ಲಿ ಪ್ರತ್ಯೇಕ ತಂಡವಾಗಿಯೂ ಭಾಗವಹಿಸಬಹುದಾಗಿದೆ. ಭಾಗವಹಿಸಿದ ಪ್ರತಿ ತಂಡದ ವಿದ್ಯಾರ್ಥಿಗಳಿಗೂ ಅಭಿನಂದನ ಪತ್ರ ಹಾಗೂ ಶಾಲೆಗೆ ಸ್ಮರಣಿಗೆ ಮತ್ತು ಅಭಿನಂದನ ಪತ್ರ ನೀಡಲಾಗುವುದು.

ನಾಡಗೀತೆ ಮತ್ತು ವಂದೇಮಾತರಂ ಗಾಯನಕ್ಕೆ ಪ್ರತ್ಯೇಕವಾಗಿ ಪ್ರತಿ ವಿಭಾಗದಲ್ಲಿ ಮೂರು ತಂಡಗಳನ್ನು ಪ್ರಥಮ, ದ್ವಿತೀಯ, ತೃತೀಯ ತಂಡಗಳಾಗಿ ಆಯ್ಕೆ ಮಾಡಲಾಗುವುದು. ವಿಜೇತರಾದ ಒಟ್ಟು 12 ತಂಡಗಳಿಗೆ ನಗದು ಪುರಸ್ಕಾರ ಮತ್ತು ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಮಂಜುನಾಥ್ ಬ್ಯಾಣದ ತಿಳಿಸಿದ್ದಾರೆ.

ಅದೇ ದಿನ ಸಂಜೆ 4ಕ್ಕೆ ನಗರ ಸಂಕೀರ್ತನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಅಂದೇ ಪ್ರಶಸ್ತಿ ವಿತರಿಸಲಾಗುವುದು. ಹಾಗೂ ಈ ದಿನ ಸಂಜೆ ಗುರುಕುಲ ವಿದ್ಯಾರ್ಥಿಗಳಿಂದ ಸಂಗೀತ, ಭರತ ನಾಟ್ಯ ಸೇರಿದಂತೆ ವೈವಿದ್ಯಮಯ ನೃತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಫೆ. 17ರಂದು ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಯಕ್ಷಯೋತ್ಸವ

ಪ್ರತಿ ವರ್ಷ ಶ್ರೀ ವ್ಯಾಸ ಮಹರ್ಷಿ ಗುರುಕುಲದಿಂದ ಕೊಡಮಾಡುವ ಶ್ರೀ ವೇದ ವ್ಯಾಸ ಗುರುಪುರಸ್ಕಾರವನ್ನು ಫೆ. 17ರಂದು ಸಂಜೆ 4ಕ್ಕೆ ಆರಂಭವಾಗಲಿರುವ ಷೋಡಶೀಯ ಪ್ರದರ್ಶಿನಿ ಸಂಭ್ರಮೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಹಾಗೂ ಇದೇ ದಿನ ಸಂಜೆ 6ರಿಂದ ತಾಲ್ಲೂಕಿನ ವಿವಿಧ ಶಾಲೆಯ ಮಕ್ಕಳು ಅಖ್ಯಾನಿಸುವ ಮೂರು ಯಕ್ಷ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ವಾರಂಬಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಮೇದಿನಿ ನಿರ್ಮಾಣ ಪ್ರಸಂಗ ನಾರಾಯಣ ಅರೋಡಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡರೆ, ಶ್ರೀ ವ್ಯಾಸ ಮಹರ್ಷಿ ಗುರುಕುಲದ ಯಕ್ಷ ಕುಟೀರದ ಮಕ್ಕಳಿಂದ ಎ.ಆರ್. ಗಣಪತಿ ಭಟ್ ಇವರ ನಿರ್ದೇಶನದಲ್ಲಿ ಲವ-ಕುಶ ಪ್ರಸಂಗ ಅಖ್ಯಾನಗೊಳ್ಳಲಿದೆ. ನಂತರ ಹೆಬ್ಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಗೋಪಾಲಮೂರ್ತಿ ಹೆಬ್ಹೈಲು ಇವರ ನಿರ್ದೇಶನದಲ್ಲಿ ವೀರ ಅಭಿಮನ್ಯು ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

Leave a comment