ಹೊಸನಗರ: ಪಟ್ಟಣದ ಬಸ್ ನಿಲ್ದಾಣದ ಕೆಳ ಭಾಗವಾದ ಚೌಡಮ್ಮ ರಸ್ತೆಯಿಂದ ಸಂತೆ ಮಾರ್ಕೆಟ್ ರಸ್ತೆಯಾದ ಶಿವಪ್ಪನಾಯಕ ರಸ್ತೆಯವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದ್ದು, ಇನ್ಮುಂದೆ ಇಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆ ಮಾಡಿದರೆ ದುಬಾರಿ ದಂಡ ವಿಧಿಸುವುದಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಆದೇಶದ ಮೇರೆಗೆ ಸಬ್ಇನ್ಸ್‌ಪೆಕ್ಟರ್ ರಾಜರೆಡ್ಡಿ ಹೇಳಿದ್ದಾರೆ.
ಚೌಡಮ್ಮ ರಸ್ತೆಯ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧದ ನಾಮಫಲಕವನ್ನು ಅಳವಡಿಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಹೊಸನಗರ ಪಟ್ಟಣದಲ್ಲಿ ವಾಹನ ಮಾಲಿಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ರಸ್ತೆಯ ಮಧ್ಯ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿ-ಹೋಟೆಲ್‌ಗಳಿಗೆ ಹೋಗುವುದು ರೂಢಿಯಾಗಿದೆ. ಇದರಿಂದ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದರೆ ದಂಡ ಹಾಗೂ ಕೇಸ್ ದಾಖಲಿಸುವುದು ಅನಿವಾರ್ಯವಾಗಿದ್ದು ಇನ್ಮುಂದೆ ಎಷ್ಟೇ ರಾಜಕೀಯ ಪ್ರಭಾವ ಹೊಂದಿದ್ದರೂ ಕಾನೂನಿನ ವಿರುದ್ಧವಾಗಿ ವಾಹನ ನಿಲ್ಲಿಸಿದರೆ ಕೇಸ್ ಹಾಕಲಾಗುವುದು. ಪ್ರತಿಯೊಬ್ಬರು ವಾಹನಗಳನ್ನು ಓಡಿಸುವುದರ ಜೊತೆಗೆ ನಿಲ್ಲಿಸುವುದರಲ್ಲಿ ಗಮನ ಹರಿಸಿ ನಿಗದಿತ ಸ್ಥಳಗಳಲ್ಲಿ ವಾಹನವನ್ನು ಪಾರ್ಕಿಂಗ್ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪಿ.ಎಸ್.ಐ ಪರಶುರಾಮ್, ಗಂಗಣ್ಣ, ಮಹೇಶ್, ಸಂದೀಪ್ ರಾಘವೇಂದ್ರ, ಸುನೀಲ್, ರಂಜಿತ್ ಕುಮಾರ್, ತೀರ್ಥೇಶ್, ಗೋಪಾಲಕೃಷ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.