ಶಿವಮೊಗ್ಗ ; ಆಸ್ಪತ್ರೆಗಳು ಪ್ರಸ್ತುತ ದಿನಮಾನಗಳಲ್ಲಿ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ವೈದ್ಯರುಗಳಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿದೆ ಎಂದು ವಾರ್ತಾಧಿಕಾರಿ ಆರ್ ಮಾರುತಿ ತಿಳಿಸಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಹಾಗೂ ತೃಪ್ತಿ ಹಾಸ್ಪಿಟಲ್ ಇವರ ಸಂಯುಕ್ತ ಆಶ್ರಯದಲ್ಲಿ ತೃಪ್ತಿ ಆಸ್ಪತ್ರೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತೃಪ್ತಿ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಅವರು ಸೇವಾ ಮನೋಭಾವದಿಂದ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರವುದು ಸಮಾಜಕ್ಕೆ ನೀಡುತ್ತಿರುವು ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಇರುವವರಿಗೆ ಮಾತ್ರ ಇಂತಹ ಕಾರ್ಯಗಳನ್ನು ನಡೆಸಲು ಸಮಯ ಸಿಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ಇಂತಹ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು, ಆರೋಗ್ಯದ ಬಗ್ಗೆ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದ ಅವರು, ದೇಹದ ಭಾಗಗಳಲ್ಲಿ ಮುಖ್ಯವಾಗಿರುವ ಮೂತ್ರಕೋಶ, ಲಿವರ್, ಹೃದಯ ಇವುಗಳ ತಪಾಸಣೆಗೆ ಇತರೆ ಆಸ್ಪತ್ರೆಗಳಲ್ಲಿ ಸಾಕಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ತೃಪ್ತಿ ಆಸ್ಪತ್ರೆ ಇವುಗಳ ತಪಾಸಣೆಯನ್ನು ಉಚಿತವಾಗಿ ನಡೆಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಎಂದು ಹೇಳಿದರು.

ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಕನಸಾಗಿದೆ. ಈ ನಿಟ್ಟಿನಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದೇನೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ದೊರಕಿಸಿ ಕೊಡುವುದು ನನ್ನ ಮೊದಲ ಆಧ್ಯತೆಯಾಗಿದೆ. ಕಿಡ್ನಿ, ಲಿವರ್ ಹಾಗೂ ಹೃದಯದ ಆರೋಗ್ಯ ಉತ್ತಮವಾಗಿದ್ದರೆ ಮನುಷ್ಯ ಆರೋಗ್ಯವಾಗಿರುತ್ತಾನೆ. ಇವುಗಳು ಉತ್ತಮವಾಗಿರಬೇಕಾದರೆ ಮಿತವಾದ ಆಹಾರ, ವ್ಯಾಯಾಮ ಮತ್ತು ನಡಿಗೆಯನ್ನು ಮಾಡಲೇಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ಗೋ.ವಾ. ಮೋಹನಕೃಷ್ಣ ಮತ್ತಿತರರಿದ್ದರು.







