ಬಾಳೆಹೊನ್ನೂರು ; ಚಂಚಲವಾದ ಮನಸ್ಸನ್ನು ತಣ್ಣಗಿಡುವ ಜೀವನ ಮಾರ್ಗವೇ ಆಧ್ಯಾತ್ಮ. ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಸಾಧನೆ ಮತ್ತು ಪ್ರಯತ್ನ ಬೇಕು. ಸತ್ಯ ಸಂಸ್ಕೃತಿ ಗೌರವಿಸದೇ ಹೋದರ ಜೀವನ ನಾಶಗೊಳ್ಳುತ್ತದೆ. ಸತ್ಯ ಸನಾತನ ಸಂಸ್ಕೃತಿ ಗೌರವಿಸುವುದರಿಂದ ಜೀವನಕ್ಕೆ ಬೆಲೆ ನೆಲೆ ಪ್ರಾಪ್ತವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸುಖಕ್ಕೊಂದು ಅರ್ಥ ಬರುವುದು ಕಷ್ಟದಿಂದ. ಸಂಪಾದಿಸಿದ ಆಸ್ತಿ ಗಳಿಸಿದ ಸಂಪತ್ತು ಶಾಶ್ವತವೆಂದು ಮನುಷ್ಯ ತಿಳಿದಿದ್ದಾನೆ. ಸತ್ಯದ ಸತ್ಪಥದಲ್ಲಿ ಜೀವನ ವಿಕಾಸಗೊಳ್ಳಬೇಕು. ಒಂದು ಧರ್ಮ ಇನ್ನೊಂದು ಧರ್ಮದ ಆ ಸತ್ಯವನ್ನು ಪರಿಗಣಿಸದಿದ್ದರೂ ಸತ್ಯ ಬದಲಾಗುವುದಿಲ್ಲ. ವಸ್ತು ಒಡವೆಗಳ ಹೊರ ರೂಪ ಬದಲಾಗಬಹುದು. ಆದರೆ ಒಳಗಿರುವ ಮೂಲ ಸತ್ಯ ಬದಲಾಗುವುದಿಲ್ಲ. ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂಬುದುನ್ನು ಕಲಿಸುತ್ತದೆ. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತದೆ. ದೊಡ್ಡದಾಗಿ ಹೊತ್ತಿ ಉರಿಯುವ ದೀಪ ಬಹಳ ಹೊತ್ತು ಬೆಳಗುವುದಿಲ್ಲ. ನಂದಾದೀಪ ನಿಧಾನವಾಗಿ ಬಹಳ ಹೊತ್ತು ಉರಿದು ಬೆಳಕು ನೀಡುವುದು. ಬದುಕಿನಲ್ಲಿ ಸಾಧಿಸುವ ಗುರಿ ಹೊತ್ತು ಆತ್ಮ ವಿಶ್ವಾಸದಿಂದ ಮುನ್ನಡೆಯುವುದರಿಂದ ಶ್ರೇಯಸ್ಸು ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ಮಾಗಣಗೇರಿ ಶ್ರೀ ರುದ್ರಮುನೀಶ್ವರ ಹಿರೇಮಠಕ್ಕೆ ವಿದ್ಯಾ ವಿನಯ ಸಂಪನ್ನರಾದ ದಾನಯ್ಯ ದೇವರನ್ನು ನಿಯುಕ್ತಿಗೊಳಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಈ ಅಪೂರ್ವ ಸಮಾರಂಭದಲ್ಲಿ ಸಂಗೊಳ್ಳಿ, ಆಲೂರು, ಮಾದನಹಿಪ್ಪರಗಿ, ತೇರದಾಳ, ಐನಾಪುರ ಶ್ರೀಗಳು ಮತ್ತು ಮಾಗಣಗೇರಿ ಗೊಲ್ಲಾರಪ್ಪಗೌಡ ಮಾಲಿ ಪಾಟೀಲ ಮತ್ತು ಅನೇಕ ಗಣ್ಯರು, ತೇರದಾಳ, ಜಮಖಂಡಿ, ಸಿಂದಗಿ, ಕರಜಗಿ ಮೊದಲಾದ ಗ್ರಾಮಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.
1 thought on “ಸತ್ಯ ಸಂಸ್ಕೃತಿ ಗೌರವಿಸುವುದರಿಂದ ಜೀವನಕ್ಕೆ ಬೆಲೆ ನೆಲೆ ; ರಂಭಾಪುರಿ ಜಗದ್ಗುರು”