ರಿಪ್ಪನ್‌ಪೇಟೆ ; “ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಜೀವನದಲ್ಲಿ ನಿಜವಾದ ನೆಮ್ಮದಿಯನ್ನು ನೀಡುತ್ತದೆ. ಇಂದಿನ ತಂತ್ರಜ್ಞಾನ ಪ್ರಭಾವಿತ ಒತ್ತಡದ ಯುಗದಲ್ಲಿ ಸಮಾಜ ಸೇವೆಯೇ ಮಾನವನನ್ನು ಮನುಷ್ಯನಾಗಿರಿಸುತ್ತದೆ,” ಎಂದು ರೋಟರಿ ಜಿಲ್ಲಾ 3182ರ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಜಿಲ್ಲಾ ಗವರ್ನರ್‌ರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿಶ್ವದ 220 ರಾಷ್ಟ್ರಗಳಲ್ಲಿ 11 ಲಕ್ಷಕ್ಕೂ ಹೆಚ್ಚು ರೋಟರಿಯನ್ನರು ಆರೋಗ್ಯ, ಶಿಕ್ಷಣ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದ್ದಾರೆ. ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನದ ಮಹಾ ಕಾರ್ಯಕ್ಕೆ ರೋಟರಿ ನೀಡಿರುವ ಕೊಡುಗೆ ಅಪಾರ,” ಎಂದು ಅಭಿಪ್ರಾಯಪಟ್ಟರು.
ಮಲೆನಾಡಿನ ಮಣ್ಣಿನಲ್ಲಿ ಸೇವಾ ಮನೋಭಾವ ‘ರಕ್ತಗತ’ವಾಗಿರುವುದನ್ನು ಉಲ್ಲೇಖಿಸಿದ ಅವರು, “ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ರೋಟರಿ ತೆರೆಯಲ್ಪಟ್ಟಿದೆ,” ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಸಿಸ್ಟೆಂಟ್ ಗವರ್ನರ್ ಎಂ.ಬಿ. ಲಕ್ಷ್ಮಣಗೌಡ ಮಾತನಾಡಿ, “ಕಳೆದ 15 ವರ್ಷಗಳಿಂದ ರಿಪ್ಪನ್ ಪೇಟೆ ರೋಟರಿ ಕ್ಲಬ್ ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಫಲಪ್ರದ ಸೇವೆ ನೀಡುತ್ತಿದೆ,” ಎಂದು ಹೇಳಿದರು. ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ, ರಕ್ತದಾನ, ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ, ಸಂಚಾರ ಸುರಕ್ಷತಾ ಜಾಗೃತಿ, ರೈತರಿಗೆ ಉಚಿತ ಕೃಷಿ ಪರಿಕರ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರದಾನ, ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಸೇವಾಕಾರ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿದರು. ಕೃಷಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಅನಂತಮೂರ್ತಿ ಜವಳಿ, ಸಹಕಾರಿ ಕ್ಷೇತ್ರದ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ. ಪರಮೇಶ್, ಸಮಾಜ ಸೇವೆಗೆ ಸುನಂದ, ಗಿನ್ನಿಸ್ ದಾಖಲೆ ಪಡೆದ ಕವನಶ್ರೀ, ಶಿಕ್ಷಣ ಸಾಧನೆಗಾಗಿ ಐಶ್ವರ್ಯ ಡಾಕಪ್ಪ ಮತ್ತು ಕ್ರೀಡಾ ಕ್ಷೇತ್ರದ ಪಂಚಮಿ ರವಿಶಂಕರ್ ಅವರಿಗೆ ಗೌರವ ಸಲ್ಲಿಸಲಾಯಿತು.

ಕ್ಲಬ್ ಅಧ್ಯಕ್ಷ ಕೃಷ್ಣರಾಜ ಎ.ಎಂ ಸಭಾಧ್ಯಕ್ಷತೆ ವಹಿಸಿದರು. ವಲಯ ಸೇನೆ ಭರತ್ ಎಂ. ಕೂಡ್ಲು, ಕಾರ್ಯದರ್ಶಿ ರಾಧಾಕೃಷ್ಣ ಜೆ. ರೋಟರಿ ಜಿಲ್ಲಾ 31 82ರ ಪ್ರಥಮ ಮಹಿಳೆ ರೇಖಾ ಪಲಾಕ್ಷ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸವಿತಾ ರಾಧಾಕೃಷ್ಣ ಮತ್ತು ಅಮಿತ್ ಬಲ್ಲಾಳ್ ಪ್ರಾರ್ಥನೆ ಸಲ್ಲಿಸಿದರು. ಕಾರ್ಯದರ್ಶಿ ರವೀಂದ್ರ ಬಲ್ಲಾಳ್ ವರದಿ ವಾಚಿಸಿದರು. ಗಣೇಶ್ ಆರ್., ಸಬಾಸ್ಟಿನ್, ಎಂ.ಬಿ ಮಂಜುನಾಥ್ ನಿರೂಪಣೆ ನಿರ್ವಹಿಸಿದ್ದು, ರಾಧಾಕೃಷ್ಣ ಜೆ. ವಂದನೆ ಸಲ್ಲಿಸಿದರು.







