ಹೊಸನಗರ ; ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

By malnad tech

Published on:

Spread the love

ಹೊಸನಗರ ; ಸರ್ಕಾರದ ಸುತ್ತೋಲೆಯಲ್ಲಿ ಹಲವು ಮಹರ್ಷಿಗಳ ಜಯಂತಿ ದೇಶ ಸೇವೆ ಮಾಡಿದವರ ಜಯಂತಿ ಸಾಹಿತಿಗಳ ಜಯಂತಿಗಳಿಗೆ ರಜೆ ನೀಡಿ ಜಯಂತಿ ಆಚರಿಸುತ್ತೇವೆ. ಆದರೆ ಸರ್ಕಾರಗಳು ಶಾಲೆ, ಕಾಲೇಜ್‌ಗಳಿಗೆ ರಜೆ ನೀಡದೇ ವಿದ್ಯಾರ್ಥಿಗಳನ್ನು ಜಯಂತಿ ಕಾರ್ಯಕ್ರಮಗಳಿಗೆ ಕರೆ ತಂದರೆ ಮಹಾತ್ಮರ ಜಯಂತಿಗೂ ಮಹತ್ವ ಬರುತ್ತದೆ ಮತ್ತು ಮಹತ್ವರ ಬಗ್ಗೆಯು ಅವರಿಗೆ ತಿಳಿಯುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಜಂಬರಗಟ್ಟ ಮಂಜಪ್ಪ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತ್, ಪಟ್ಟಣ ಪಂಚಾಯಿತ್ ಮತ್ತು ಸಮಾಜ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿಯನ್ನು ಆದಿಕವಿ ಎಂದೂ ಕರೆಯುತ್ತಾರೆ ಆದಿ ಕವಿ ಎನ್ನುವುದು ಸಂಸ್ಕೃತ ಭಾಷೆಯ ಮೊದಲ ಕವಿಗೆ ಅನುವಾದಿಸುತ್ತದೆ. ವಾಲ್ಮೀಕಿ ಶ್ರೀ ರಾಮನ ವನವಾಸದ ಸಮಯದಲ್ಲಿ ಶ್ರೀರಾಮನೊಂದಿಗೆ ಇದ್ದವರು ಮತ್ತು ನಂತರ ದೇವಿ ಸೀತೆಗೆ ಅವರ ಆಶ್ರಯದಲ್ಲಿ ಆಶ್ರಯ ನೀಡಿದವರು. ಮಹರ್ಷಿ ವಾಲ್ಮೀಕಿಯ ಆರಂಭಿಕ ಹೆಸರು ರತ್ನಾಕರ ಋಷಿ ನಾರದ ಮುನಿಯಿಂದ ಭಗವಾನ್ ರಾಮನ ಮಹಾನ್ ಭಕ್ತನಾಗಿ ರೂಪಾಂತರಗೊಂಡರು ಎಂದು ವಾಲ್ಮೀಕಿ ರಾಮಾಯಣದ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಅಕ್ಷರದಾಸೋಹ ಸಂಯೋಜನಾಧಿಕಾರಿ ಶೇಷಾಚಲ ಜಿ. ನಾಯ್ಕ್ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ರಾಮಾಯಣ ಜೀವನದಲ್ಲಿ ಒಮ್ಮೆಯಾದರೂ ಓದಬೇಕು ಅದರ ಅರ್ಥ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಹೊಸನಗರ ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಸ್ ಹೆಚ್.ನಿಂಗಮೂರ್ತಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಬರಿಯ ಆದಿಕವಿಯಲ್ಲ ಆದರ್ಶ ಕವಿಯಾಗಿ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ. ಇವರ ಆದರ್ಶ ಜೀವನ ಚರಿತ್ರೆ ಅವರು ನಡೆದು ಬಂದ ದಾರಿ ಇಂದಿನ ಯುವ ಜನರಿಗೆ ಮಾರ್ಗದರ್ಶಕವಾಗಿದ್ದು ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡಾಗ ಎಲ್ಲರೂ ವಾಲ್ಮೀಕಿಯಂತೆ ಆದರ್ಶ ವ್ಯಕ್ತಿಯಾಗಬಹುದು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಚೇತನಾ ಆರ್.ಪಿ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ತಾಲ್ಲೂಕು ವಾಲ್ಮೀಕಿ ಜನಾಂಗದ ಅಧ್ಯಕ್ಷ ಎಸ್.ಹೆಚ್. ನಿಂಗಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಬಿ.ಎಂ, ತಾಲ್ಲೂಕು ಪಂಚಾಯಿತಿ ಪಿಡಿಓ ಪವನ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್, ಶಿರಾಸ್ಥೆದಾರ್ ಮಂಜುನಾಥ್, ಪಟ್ಟಣ ಪಂಚಾಯತಿ ಆರೋಗ್ಯಾಧಿಕಾರಿ ಶೃತಿ, ರಾಘವೇಂದ್ರ ಸರೋಜಮ್ಮ, ಗುಮಾಸ್ಥರಾದ ಚಿರಾಗ್, ಆನಂದಪ್ಪ, ಕಲ್ಪನ, ಕೀರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವಾಲ್ಮೀಕಿ ಜಯಂತಿಗೆ ಸರ್ಕಾರಿ ಅಧಿಕಾರಿಗಳು ;

ಪ್ರತಿ ವರ್ಷ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆಯನ್ನು ತಾಲ್ಲೂಕು ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗುತ್ತಿದೆ. ಸರ್ಕಾರ ವಾಲ್ಮೀಕಿ ಜಯಂತಿಗೆ ರಜೆಯನ್ನು ಘೋಷಿಸಿದೆ. ಆದರೆ ವಾಲ್ಮೀಕಿ ಜಯಂತಿಗೆ ಬೆರಳೆಣಿಕೆಯಷ್ಟು ಅಧಿಕಾರಿಗಳ ಹಾಜರಾತಿ ಬೇಸರವಾಗುತ್ತಿದೆ. ಕರಪತ್ರದಲ್ಲಿ 10-20 ಜನರ ಹೆಸರಿದೆ. ಆದರೆ ಬರುವುದು ಬೆರಳೆಣಿಕೆಯಷ್ಟು ಅಧಿಕಾರಿಗಳು. ಈ ವರ್ಷದ ಜಯಂತಿಯಲ್ಲಿ ತಾಲ್ಲೂಕು ಪಂಚಾಯತಿಯಿಂದ ಇಬ್ಬರು, ಕಂದಾಯ ಇಲಾಖೆಯಿಂದ ಇಬ್ಬರು, ಪಟ್ಟಣ ಪಂಚಾಯತಿಯಿಂದ ಒಬ್ಬರು ಬಂದರೆ ಹಿರಿಯರ ಜಯಂತಿ ಆಚರಿಸುವುದು ಹೇಗೆ? ಎಂದು ತಾಲ್ಲೂಕು ಮಹರ್ಷಿ ವಾಲ್ಮೀಕಿ ಸಮಾಜದ ನಾಯಕ ಎಸ್.ಹೆಚ್. ನಿಂಗಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

1 thought on “ಹೊಸನಗರ ; ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ”

Leave a comment