ರಿಪ್ಪನ್ಪೇಟೆ ; ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಬಟಾಣಿಜಡ್ಡು, ಕೊಳವಂಕ ಗ್ರಾಮಗಳಲ್ಲಿ ಕಾಡುಕೋಣ ಮತ್ತು ಕಾಡಾನೆಗಳ ದಾಳಿಯಿಂದಾಗಿ ರೈತರ ಭತ್ತ, ಅಡಿಕೆ, ಬಾಳೆ ಬೆಳೆ ನಾಶಗೊಳಿಸಿರುವುದು ರೈತರಲ್ಲಿ ಆತಂಕಕ್ಕೆ ಎಡೆಮಾಡಿದೆ.
ಗುರುವಾರ ರಾತ್ರಿ ಕೊಳಂವಕ ಗ್ರಾಮದಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡರೆ ಬಟಾಣಿಜಡ್ಡು ಗ್ರಾಮದ ನಾಗಪ್ಪ ಎಂಬುವರ ಜಮೀನಿನ ಭತ್ತದ ಗದ್ದೆಯಲ್ಲಿ ಕಾಡಾನೆಗಳು ನಡೆದಾಡಿ ಭತ್ತದ ಬೆಳೆ ಸಂಪೂರ್ಣ ತಿಂದು ನಾಶಪಡಿಸಿದ್ದು ರೈತಾಪಿ ವರ್ಗ ಕಂಗಾಲಾಗಿ ಹೋಗಿದೆ.
ಕಳೆದ ವರ್ಷದಲ್ಲಿ ಸಹ ಈ ಗ್ರಾಮಗಳಲ್ಲಿ ಕಾಡಾನೆ ದಾಳಿ ನಡೆದಿದ್ದು ಅರಣ್ಯ ಇಲಾಖೆಯವರು ಕಾಡಾನೆ ಓಡಿಸಲು ಹರಸಾಹಸ ಪಡುವಂತಾಗಿತ್ತು. ಆದರೆ ಪುನಃ ಈ ಬಾರಿಯಲ್ಲಿ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ರೈತರಲ್ಲಿ ಭಯ ಹುಟ್ಟಿಸಿವೆ.
ಒಟ್ಟಾರೆಯಾಗಿ ಫಸಲಿಗೆ ಬಂದ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದ್ದು ಕಳೆದ 2 ವರ್ಷದ ಹಿಂದೆ ಕಾಡಿಗೆ ದರಗೆಲೆ ತರಲು ಹೋದ ರೈತನ್ನು ಬಲಿ ಪಡೆದಿದ್ದ ಒಂಟಿ ಸಲಗದಿಂದಾಗಿ ಇಲ್ಲಿನ ರೈತರು ಕಾಡಿನ ಕಡೆ ಮುಖ ಮಾಡಲು ಭಯ ಪಡುತ್ತಿರುವಾಗಲೇ ಮತ್ತೆ ಆನೆ, ಕಾಡುಕೋಣಗಳು ಕಾಡಿನಿಂದ ನಾಡಿಗೆ ಬರುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಇನ್ನಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಮುಂದಾಗುವಂತೆ ರೈತರು ಆಗ್ರಹಿಸಿದ್ದಾರೆ.







