ಶಿವಮೊಗ್ಗ : ಶರಾವತಿ ಪಂಪ್ಡ್ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ಈ ಯೋಜನೆಯ ಡಿಪಿಆರ್ನ್ನು ಸಾರ್ವಜನಿಕರ ಮುಂದೆ ಇಟ್ಟಿಲ್ಲ ಎಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಹಾಗೂ ಕೇಂದ ಸರ್ಕಾರ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಶರಾವತಿ ಕಣಿವಿಯಲ್ಲಿ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಜಾರಿಮಾಡಲು ಹೊರಟಿದೆ. ಇದಕ್ಕಾಗಿ 350 ಎಕರೆ ಜಾಗವನ್ನು ಗುರುತಿಸಿದೆ. ಸರ್ಕಾರಗಳು ಈ ರೀತಿಯ ಬೃಹತ್ ಯೋಜನೆ ಮಾಡುವಾಗ ಸ್ಥಳೀಯ ನಾಗರೀಕರೊಂದಿಗೆ, ಪರಿಸರವಾದಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಬೇಕಿತ್ತು.ಯೋಜನೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸ್ಥಳೀಯ ನಾಗರೀಕರಿಗೆ ನೀಡುವುದು ಸರ್ಕಾರದ ಹಕ್ಕಾಗಿದೆ. ಆದರೆ ಸರ್ಕಾರ ಇದೂವರೆಗೂ ಯೋಜನೆಯ ಡಿಪಿಆರ್ನ್ನು ಸಾರ್ವಜನಿಕರ ಮುಂದೆ ಇಡುವ ಕೆಲಸವನ್ನು ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವೈಜ್ಞಾನಿಕವಾದ ಮಾರ್ಗಗಳನ್ನು ಅನುಸರಿಸಬೇಕು. ದಟ್ಟ ಅರಣ್ಯದಲ್ಲಿ ಈ ಯೋಜನೆ ಬೇಡ. ಇದರಿಂದ ಪರಿಸರದ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗುತ್ತದೆ. ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿ ಭೂಸವಕಳಿ, ಭೂಕೊರತೆ ಉಂಟಾಗಿ ಅಪಾಯ ಹೆಚ್ಚಾಗುತ್ತದೆ ಎಂದು ದೂರಿದರು. ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.







