ಹೊಸನಗರ ; ಕಳೆದೊಂದು ದಶಕದಿಂದ ದೀವರ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಆರ್ಯ ಈಡಿಗ ಭವನದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷದ ಕಾರ್ಯಕ್ರಮವನ್ನು ಡಿ.21ರಂದು ಹಮ್ಮಿಕೊಳ್ಳಲಾಗಿದೆ. ತಾಲೂಕಿನಿಂದ ಆರ್ಯ ಈಡಿಗ ಸಮಾಜದ ಜನರು ಹಾಗೂ ಉಪಪಂಗಡಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೇಂದು ಎಂದು ರಾಜ್ಯ ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಯ ಸಹಕಾರ್ಯದರ್ಶಿ ವಾಸಪ್ಪ ಮಾಸ್ತಿಕಟ್ಟೆ ಕರೆ ನೀಡಿದ್ದಾರೆ.
ಇಲ್ಲಿನ ಶೀತಲ್ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ದೀವರ ಜನಾಂಗ, ಆಚಾರ ವಿಚಾರಗಳಿಗೆ ಸುಮಾರು 1 ಸಾವಿರ ವರ್ಷ ಇತಿಹಾಸವಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ. ದೀವರ ಸಂಸ್ಕೃತಿ, ಜಾನಪದ ಕಲೆ, ಸಾಹಿತ್ಯ, ಅಸ್ಮಿತೆಯನ್ನು ಅನಾವರಣಗೊಳಿಸಲು ಪ್ರತಿವರ್ಷವೂ ಈ ಕಾರ‍್ಯಕ್ರಮ ನಡೆಯುತ್ತಿದೆ. ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ನಡೆಸಲು ಆಯೋಜಕರು ಮುಂದಾಗಿದ್ದಾರೆ. ಸಮಾಜದ ಹಿರಿಯ ಗಣ್ಯರು, ರಾಜಕೀಯ ಗಣ್ಯರಾದ ಬಿ.ಕೆ.ಹರಿಪ್ರಸಾದ್, ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸಾಧಕರಿಗೆ, ಗಣ್ಯರಿಗೆ ಸನ್ಮಾನ, ಕಲಾಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ದೀವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಸೊನಲೆ ಶ್ರೀನಿವಾಸ ಮಾತನಾಡಿ, ಪ್ರತಿ ಜನಾಂಗದಲ್ಲಿಯು ವಿಶೇಷತೆಗಳಿವೆ. ದೀವರ ಜನಾಂಗ ಗುಡ್ಡಗಾಡು ಸಂಸ್ಕೃತಿಯಿಂದ ಬಂದವರು. ಹಸೆ ಚಿತ್ತಾರ, ಜಾನಪದ ಹಾಡು ಮೊದಲಾದ ಸಾಂಸ್ಕೃತಿಕ ವೈಭವ ಹಾಗೂ ಜೀವನ ಕ್ರಮ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸುತ್ತಿದೆ. ಇಂತಹ ಕಾಲಘಟ್ಟದಲ್ಲಿ ಎಲ್ಲರೂ ಒಗ್ಗೂಡಿ ಸಂಸ್ಕೃತಿಯ ಅನಾವರಣಗೊಳಿಸಲು ಸೂಕ್ತ ವೇದಿಕೆ, ಸಂದರ್ಭ ಅಗತ್ಯವಿದೆ. ಇದಕ್ಕಾಗಿ ಕಾರ‍್ಯಕ್ರಮ ಹೆಚ್ಚಿನ ಮಹತ್ವ ಪಡೆದಿದೆ ಎಂದರು.
ಪ್ರಮುಖರಾದ ನೇರಲೆ ಸ್ವಾಮಿ, ಕುಮಾರ ಮಂಡಾನಿ, ಶ್ರೀಧರ ಹಾರೋಗೊಪ್ಪ, ನಾಗಪ್ಪ ಬಾಳೆಕೊಪ್ಪ ಮತ್ತಿತರರು ಇದ್ದರು.







