ಹೊಸನಗರ ; ಶಿಕ್ಷಕ ವೃತ್ತಿ ದೇವರು ಕೊಟ್ಟ ವರ ಅದನ್ನು ಎಲ್ಲ ಶಿಕ್ಷಕರು ಅರಿತುಕೊಂಡು ನಿಷ್ಪಕ್ಷ ಸೇವೆ ಮಾಡುವ ಮನೋಬಲ ಹೊಂದಿರಬೇಕು ಶಿಕ್ಷಕ ವೃತ್ತಿ ಜಗತ್ತಿಗೆ ಸರ್ವ ಶ್ರೇಷ್ಟವಾದದ್ದು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಶಕ್ತಿ ಶಿಕ್ಷಕನಿಗಿದೆ ಎಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ಹೇಳಿದರು.
ಇಲ್ಲಿನ ಆರ್ಯ ಈಡಿಗರ ಸಭಾಭವನದ ಆವರಣದಲ್ಲಿ ವಿದ್ಯಾಸನ್ನಿಧಾನಂ ಶಾಲೆಯ ಕಲಾವೈಭವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವರಿಗಿರುವುದು ಒಂದೇ ಜನ್ಮ, ಈ ಜನ್ಮದಲ್ಲಿ ಪಾಪ-ಪುಣ್ಯಗಳೆರಡನ್ನು ಮಾಡುವ ಅವಕಾಶವಿರುತ್ತದೆ. ಪಾಪ ಮಾಡಿದವರು ಒಂದಿಲ್ಲೊಂದು ದಿನ ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ. ಆದಷ್ಟು ವಿದ್ಯಾ ದಾನ ಮಾಡುವುದರಿಂದ ಪಾಪದಿಂದ ವಿಮುಕ್ತಿಗೊಳ್ಳಬಹುದು. ತಾವು ದುಡಿದ ಅರ್ಧಭಾಗ ವಿದ್ಯಾ ದಾನಕ್ಕಾಗಿ ನೀಡುವುದರಿಂದ ಬಡಮಕ್ಕಳಿಗೆ ವಿದ್ಯೆ ದಾನ ಮಾಡಿದ ಪುಣ್ಯ ನಿಮಗೆ ಲಭಿಸಲಿದೆ. ಶಿಕ್ಷಕರಾದವರು ನೈತಿಕ ಮೌಲ್ಯಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಪಿ ಶ್ರೀನಿವಾಸ್ ಮಾತನಾಡಿ, ನಾವು ವಿದ್ಯಾ ಸಂಸ್ಥೆಯನ್ನು ಕಟ್ಟಿ ಸುಮಾರು ಹತ್ತು ವರ್ಷಗಳು ಕಳೆದಿದೆ. ನಮಗೆ ಸರಿಯಾದ ಜಾಗದ ವ್ಯವಸ್ಥೆಯಿಲ್ಲದೇ ಬರಿ ಎಲ್.ಕೆ.ಜಿ, ಯು.ಕೆ.ಜಿ.ಯಲ್ಲಿಯೇ ಇದ್ದೇವೆ. ಅದು ಅಲ್ಲದೇ ನಮ್ಮ ಸಂಸ್ಥೆಯ ವಿರುದ್ಧ ಕೆಲವರು ಪಿತೂರಿಯ ಸಂಚು ನಡೆಸುತ್ತಿರುವುದರಿಂದ ನಮ್ಮ ಮುಂದಿನ ತರಗತಿಗೆ ಹೋಗಲು ಸಾಧ್ಯವಾಗಿಲ್ಲ. ಒಂದಿಲ್ಲೊಂದು ದಿನ ಉನ್ನತ ಮಟ್ಟಕ್ಕೆ ಹೋಗಲು ಗುರಿ ಹೊಂದಿದ್ದು ಹೊಸನಗರ ತಾಲ್ಲೂಕಿನವರ ಸಹಕಾರ ಅತ್ಯಗತ್ಯ ಎಂದರು.
ಸುಮಾರು 30 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಸಹಾಯ ಹಸ್ತದಲ್ಲಿ ನಡೆಯುತ್ತಿದ್ದ ಕಸ್ತೂರಿ-ಬಾ ಶಿಶುವಿಹಾರ ಸಹಾಯಕಿ ಅನೇಕ ಮಕ್ಕಳ ಏಳಿಗೆಗಾಗಿ ದುಡಿದಿರುವ ಸುಮಾರು 10 ವರ್ಷಗಳಿಂದ ವಿದ್ಯಾಸನ್ನಿಧಾನಂ ಸಂಸ್ಥೆಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಹೆಚ್.ಎಸ್. ನಾಗರಾಜ್‌ರವರ ಸಹೋದರಿ ಹೆಚ್.ಎಸ್. ಅನಿತಾರಿಗೆ ಈ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿತಾ, ಈ ಸಂಸ್ಥೆ ನನನ್ನೂ ಗುರುತಿಸಿರುವುದಕ್ಕೆ ತುಂಬಾ ಸಂತೋಷವಾಯಿತು. ಕಸ್ತೂರಿ ಶಿಶುವಿಹಾರದಲ್ಲಿ ಇದ್ದಾಗ ಮನೆ-ಮನೆಗೆ ಹೋಗಿ ಮೂರು ವರ್ಷದ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದೆ. ಆ ಮಕ್ಕಳನ್ನು ಕರೆದುಕೊಂಡು ಬರುವುದೇ ಒಂದು ಸಂತೋಷವಾಗುತ್ತಿತ್ತು. ನನಗೆ ಮಕ್ಕಳ ಜೊತೆಗೆ ಇರುವುದೆಂದರೆ ಖುಷಿಯಾಗುತ್ತದೆ. ಅಂದು ಕರೆದುಕೊಂಡು ಬಂದ ಮಕ್ಕಳು ಬೇರೆ-ಬೇರೆ ದೇಶಗಳಲ್ಲಿ ಹೊರ ರಾಜ್ಯದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿಯೇ ಉನ್ನತ ಹುದ್ದೆಯಲ್ಲಿದ್ದಾರೆ. ಕೆಲವರು ಬಂದು ಮಾತನಾಡಿಸಿಕೊಂಡು ಹೋಗುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರಾದ ಜಹಾಂಗೀರ್, ಹೆಗ್ಗೋಡು ಕಾಲೇಜಿನ ಪ್ರಾಂಶುಪಾಲ ಡಾ. ಎಂ ಗಣೇಶ್, ಸರ್ಕಾರಿ ಕೊಡಚಾದ್ರಿ ಕಾಲೇಜಿನ ಉಪನ್ಯಾಸಕ ಕೆ ಶ್ರೀಪತಿ ಹಳಗುಂದ, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್‌ಕುಮಾರ್, ಚಂಡಿಕಾವನ ಕಲಾ ಮತ್ತು ವಿದ್ಯಾ ಸಂಸ್ಥೆಯ ಕೆ.ಪಿ. ಶ್ರೀನಿವಾಸ್, ಶಾಲೆಯ ಮುಖ್ಯ ಶಿಕ್ಷಕಿ ಆಶಾ ಹೆಚ್.ಪಿ, ರಂಜೀತಾ, ರೆಹಮತ್, ತುಳಿಸಿ, ಇನ್ನೂ ಮುಂತಾದವರು ಉಪಸ್ಥಿರಿದ್ದರು.







