ಬದ್ಧತೆ, ಶ್ರದ್ಧೆ, ನಿಷ್ಠೆ, ಸಮಯಪಾಲನೆ ಹಾಗೂ ಶಿಸ್ತು ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ; ನಗರ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಕೊಳಗಿ

Written by Malnadtimes.in

Updated on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: ಬದ್ಧತೆ, ಶ್ರದ್ಧೆ, ನಿಷ್ಠೆ, ಸಮಯಪಾಲನೆ ಹಾಗೂ ಶಿಸ್ತು ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ನಗರ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಕೆ‌.ಆರ್. ಕೊಳಗಿ ತಿಳಿಸಿದರು.

ಸಮೀಪದ ಚಿಕ್ಕಜೇನಿ (Chikkajeni) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಲ (Mutthala) ಗ್ರಾಮದ ಹೊಸಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಕುಂಬಾರ (Kumbara) ಸಮಾಜದ 17ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಕುಂಬಾರರು ಶೈಕ್ಷಣಿಕವಾಗಿ, ರಾಜಕೀಯವಾಗಿ ಪ್ರಬಲರಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದ ಅವರು, ನಮ್ಮ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಇಂದಿನ ಸರ್ಕಾರ ಮತ್ತು ರಾಜಕಾರಣಿಗಳು ಪರಿಗಣಿಸದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಕನ್ನಡ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ಸರ್ವಜ್ಞ ನಮ್ಮ ಸಮುದಾಯದವರು, 2018 ರಲ್ಲಿ ಆಯಾಯ ತಾಲೂಕು ಕಚೇರಿಗಳಲ್ಲಿ ಇವರ ಜಯಂತಿ ಆಚರಿಸಲು ಸರ್ಕಾರ ಆದೇಶ ಮಾಡಿದ್ದು ಆದರೆ ನಮ್ಮ ಹೊಸನಗರ ತಾಲೂಕು ಆಡಳಿತ ಇವರ ಜಯಂತಿಯನ್ನು ಇದುವರೆಗೂ ಆಚರಿಸದೆ ಅವರಿಗೆ ಅಪಮಾನ ಮಾಡುತ್ತಿರುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು.

ರಾಜ್ಯದ ವಿವಿಧೆಡೆ ಹರಿದು ಹಂಚಿ ಹೋಗಿರುವ ಕುಂಬಾರ ಸಮುದಾಯದ 100ಕ್ಕೂ ಹೆಚ್ಚು ಉಪ ಪಂಗಡಗಳು ಒಗ್ಗೂಡಬೇಕು. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಸ್ಥಾನಮಾನ ಭದ್ರಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ ಅವರು, ರಾಜ್ಯದಲ್ಲಿ ಅಂದಾಜು 25 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇದ್ದರೂ, ಶೇ. 4ರಷ್ಟು ಜನ ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಕುಲಕಸುಬು ನಂಬಿ ಜೀವನ ಸಾಗಿಸುವರ ಸಂಖ್ಯೆ ಶೇ. 17.5ರಷ್ಟು ಇದೆ. ಉಳಿದವರು ಕೂಲಿಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಈ ಸಮುದಾಯದ ಏಳಿಗೆ ಬಗ್ಗೆ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.

ಕೋಡೂರು ಗ್ರಾಪಂ ಸದಸ್ಯ ಯೋಗೇಂದ್ರಪ್ಪ ಮಾತನಾಡಿ, ಉತ್ತಮ ವ್ಯಕ್ತಿತ್ವ ಬೆಳಸಿಕೊಳ್ಳಲು ಜಾತಿ ಅಡ್ಡ ಬರಲ್ಲ. ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳನ್ನು ಉತ್ತಮ ಪ್ರಜೆಯಗಳಾಗಿ ರೂಪಿಸಿ ಎಂದರು.

ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ರಾಜು, ಕೋಡೂರು ಗ್ರಾಪಂ ಅಧ್ಯಕ್ಷ ಕೆ.ವೈ. ಉಮೇಶ್, ಕೋಡೂರು ಗ್ರಾಪಂ ಉಪಾಧ್ಯಕ್ಷ ಸುಧಾಕರ, ಚಿಕ್ಕಜೇನಿ ಗ್ರಾಪಂ ಸದಸ್ಯರಾದ ವೆಂಕಟಾಚಲ, ಭದ್ರಪ್ಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಂಬಾರ ಸಂಘದ ತಾಲ್ಲೂಕು ಉಪಾಧ್ಯಕ್ಷ ಹಾಗೂ ಕೋಡೂರು ಗ್ರಾಪಂ ಸದಸ್ಯ ಶೇಖರಪ್ಪ ಎಲ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜದ ಹಿರಿಯರಾದ ಚೌಡಶೆಟ್ಟಿ ಹೊಸಕೋಟೆ, ಭದ್ರಮ್ಮ ಗೌಡಕೊಪ್ಪ ಹಾಗೂ ಕಲಾವಿದ ಶಿವಪ್ಪ, ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಸಳ್ಳಿ ಪುಟ್ಟಸ್ವಾಮಿ ಇವರನ್ನು, ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಚಿಕ್ಕಜೇನಿ ಗ್ರಾಪಂ ಸದಸ್ಯರಾದ ರಾಧಮ್ಮ, ಶಾರದ, ಕೋಡೂರು ಗ್ರಾಪಂ ಸದಸ್ಯರಾದ ಯೋಗೇಂದ್ರಪ್ಪ, ಅನ್ನಪೂರ್ಣ, ರೇಖಾ, ಚಂದ್ರಕಲಾ ಮತ್ತಿತರರು ಇದ್ದರು‌.

ಛಾಯ ಸಿ ಹೊಸಳ್ಳಿ ಪ್ರಾರ್ಥಿಸಿದರು. ಮೀನಾಕ್ಷಿ ಸ್ವಾಗತಿಸಿದರು. ಸರಿತಾ ಮತ್ತು ಇಂಪನಾ ವಾರ್ಷಿಕ ವರದಿ ವಾಚಿಸಿದರು. ರಮೇಶ್ ಎಸ್. ಹೊಸಳ್ಳಿ ನಿರೂಪಿಸಿ, ವಂದಿಸಿದರು.

Leave a Comment

error: Content is protected !!