ಸರ್ವ ಧರ್ಮಗಳ ಜನತೆಯಿಂದೊಡಗೂಡಿದ ಪಾದಯಾತ್ರೆಗೆ ಶಿವಮೊಗ್ಗದಿಂದ ಬೀಳ್ಕೊಡುಗೆ

By malnad tech

Published on:

Spread the love

ಶಿವಮೊಗ್ಗ ; ಗುರುಬಲ ಪ್ರಾಪ್ತಿಗಾಗಿ ಮನೋವಾಂಛಿತ ಸಿದ್ಧಿಗಾಗಿ ಕೈಗೊಂಡಿರುವ ಪಾದಯಾತ್ರೆಯಲ್ಲಿ ಸರ್ವ ಸಮಾಜ ಬಾಂಧವರು ಪಾಲ್ಗೊಂಡಿರುವುದು ತಮಗೆ ಸಂತೋಷ ತಂದಿದೆ ಎಂದು ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದವರೆಗೆ ಕೈಗೊಂಡಿರುವ 171 ಕಿ.ಮೀ. ಪಾದಯಾತ್ರೆ ಅಂಗವಾಗಿ ಸೋಮವಾರ ಪಾದಯಾತ್ರಿಗಳು ಶಿವಮೊಗ್ಗ ನಗರವನ್ನು ತಲುಪಿದ ನಂತರ ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ದಲ್ಲಿ ಪೂಜಾ ಪ್ರಸಾದ ವಿಶ್ರಾಂತಿಗಾಗಿ ಆಗಮಿಸಿದ ಸಂದರ್ಭದಲ್ಲಿ ಜರುಗಿದ ಧರ್ಮ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪಾದಯಾತ್ರೆಯ ಜೊತೆಗೆ ಧರ್ಮ ಜಾಗೃತಿ ಮೂಡಿಸುವ ಕಾರ್ಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದ್ದು ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಂಸ್ಕಾರವಿಲ್ಲದ ಜೀವನದಿಂದ ಏನೂ ಪ್ರಯೋಜವಿಲ್ಲ. ಪ್ರತಿಯೊಬ್ಬರೂ ಧರ್ಮವಂತರಾಗಿ ಸಂಸ್ಕಾರವಂತರಾಗಿ ಬಾಳುವ ಅವಶ್ಯಕತೆ ಇದೆ. ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿ ಸುಕ್ಷೇತ್ರದಲ್ಲಿ 18 ಮತದ ಜನತೆಗಾಗಿ 18 ಮಠಗಳನ್ನು ಸಂಸ್ಥಾಪಿಸಿದ್ದಾರೆ. ವೀರಶೈವ ಧರ್ಮ ಸರ್ವ ಜನಾಂಗದ ಜನತೆಯ ಅಭ್ಯುದಯ ಬಯಸುತ್ತ ಬಂದಿದೆ. ಶಿವಮೊಗ್ಗ ಐಟಿಐ ಸಂಸ್ಥಾಪಕರಾದ ವಿಘ್ನೇಶ್ವರಯ್ಯ ಸೋಲಾಪುರ ಅವರು ನಮ್ಮೊಡನೆ ಆಗಮಿಸಿರುವ ಶಿವಾಚಾರ್ಯರಿಗೆ 100ಕ್ಕೂ ಹೆಚ್ಚು ಪಾದಯಾತ್ರಿಗಳಿಗೆ ಆದರಾತಿಥ್ಯ ನೀಡಿರುವುದು ಅವರಲ್ಲಿರುವ ಧರ್ಮನಿಷ್ಠೆಯನ್ನು ತೋರಿಸುತ್ತದೆ ಎಂದರು.

ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಈ ಪಾದಯಾತ್ರೆಯ ಮೂಲಕ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಪೀಠಾರೋಹಣದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕದಾಂಪುರ-ಗದಗ ವೀರೇಶ್ವರ ಸ್ವಾಮಿಗಳು ಮಾತನಾಡಿ ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಇತ್ತೀಚಿನ ಕೂಗು ತಮಗೆ ನೋವನ್ನುಂಟು ಮಾಡಿದೆ. ಸಮಾಜ ಒಂದಾಗಿ ಹೆಜ್ಜೆ ಹಾಕಬೇಕಾದ ಅವಶ್ಯಕತೆ ಇದೆ ಎಂದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ಗುಳಗುಳಿ ಋಷಿಕುಮಾರ ಸ್ವಾಮಿಗಳು, ಗೋವಿನಕೋವಿ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಗಳು, ಅರಕೆರೆ ವಿರಕ್ತಮಠದ ಸ್ವಾಮಿಗಳು ಉಪಸ್ಥಿತರಿದ್ದರು.

ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥೆಯ ಸಂಸ್ಥಾಪಕ ವಿಘ್ನೇಶ್ವರಯ್ಯ ಸೋಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮದೆಲ್ಲವನ್ನು ತೊರೆದು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶಿವಾಚಾರ್ಯರ ಸಮೂಹ ನಮ್ಮ ಸಂಸ್ಥೆಗೆ ಬಂದು ವಿದ್ಯಾರ್ಥಿಗಳಿಗೆಲ್ಲ ಆಶೀರ್ವದಿಸಿದ್ದು ಸಂತೋಷ ತಂದಿದೆ. ಅವರ ಧರ್ಮ ಕಾರ್ಯಗಳಲ್ಲಿ ಕೈ ಜೋಡಿಸುವ ಕೆಲಸ ಆಗಬೇಕು ಎಂದರು.

ಆಯನೂರು ಅನನ್ಯ ಐಟಿಐ ಪ್ರಾಂಶುಪಾಲ ರವೀಶ ಸ್ವಾಗತಿಸಿದರು. ಜಿ.ಎಂ. ಮಲ್ಲಿಕಾರ್ಜುನಸ್ವಾಮಿ ನಿರೂಪಿಸಿದರು.

ಪಾದಯಾತ್ರಿಗಳು ಶಿವಮೊಗ್ಗ ನಗರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಅ.ಭಾ.ವೀ. ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಬೇಡ ಜಂಗಮ ಸಮಾಜದ ತಾಲೂಕಾ ಅಧ್ಯಕ್ಷ ಚಂದ್ರಯ್ಯನವರು ಪಾದಯಾತ್ರಿಗಳಿಗೆ ಸ್ವಾಗತ ಬಯಸಿದರು. ಐಟಿಐದಲ್ಲಿ ಪೂಜಾ ಪ್ರಸಾದ ಮುಗಿಸಿದ ಯಾತ್ರಾರ್ಥಿಗಳು ನರಸಿಂಹರಾಜಪುರ ತಾಲೂಕಿನ ಕಡೆಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಹಾರ್ದಿಕವಾಗಿ ಬೀಳ್ಕೊಡಲಾಯಿತು.

ಆರೋಗ್ಯ ತಪಾಸಣೆ ;

ಮಾಚೇನಹಳ್ಳಿ ಟಿ.ಎಂ.ಎ.ಇ.ಎಸ್. ವೈದ್ಯಕೀಯ ಸಂಸ್ಥೆಯ ವೈದ್ಯರು ಆಗಮಿಸಿ ಪಾದಯಾತ್ರಿಗಳ ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ನೀಡಿದರು.

Leave a comment