ಶಿವಮೊಗ್ಗ : ಅನೇಕ ಹಾವು ಕಡಿತ ಪ್ರಕರಣಗಳಲ್ಲಿ ಚಿಕಿತ್ಸಾಲಯಗಳಲ್ಲಿ ಕರ್ತವ್ಯದ ಅವಧಿಯಲ್ಲಿ ವೈದ್ಯರಿಲ್ಲದಿರುವುದು, ವೈದ್ಯರ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಅದನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ವಿಸ್ತೃತ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಅವಧಿಯಲ್ಲಿ ವೈದ್ಯರ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳಲಾಗದು ಎಂದ ಅವರು ಸೇವೆಯಲ್ಲಿ ಲೋಪ ಕಂಡುಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗಲಿದೆ ಎಂದವರು ನುಡಿದರು.
ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವಾನಿತರ ವೈದ್ಯರು ರಜೆಯ ಮೇಲೆ ತೆರಳಿದ್ದಾಗ ಆ ಸ್ಥಳಕ್ಕೆ ಪರ್ಯಾಯ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ನಗರದ ಸಂಪರ್ಕದಿಂದ ದೂರವಿರುವ ಗ್ರಾಮಗಳಲ್ಲಿ ಸಂಭವಿಸಬಹುದಾದ ಹಾವು ಕಡಿತ ಪ್ರಕರಣಗಳಿಗೆ ತಕ್ಷಣದ ಚಿಕಿತ್ಸೆಗೆ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳ ಬಗ್ಗೆಯೂ ಜಿಲ್ಲಾ ವೈದ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅಧೀನ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅವರು ಸೂಚಿಸಿದರು.
ಹೊಸನಗರ ತಾಲೂಕಿನ ಮತ್ತೂರಿನಲ್ಲಿನ ಹಾವು ಕಡಿತ ವ್ಯಕ್ತಿಯ ಚಿಕಿತ್ಸೆಗಾಗಿ 108 ವಾಹನದ ಸಿಬ್ಬಂದಿಗೆ ಕರೆ ಮಾಡಿದಾಗಿ ಕರೆಯನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ಅಮೂಲ್ಯ ಜೀವ ಉಳಿಸುವಲ್ಲಿ ತೋರಿದ ಅಸಹಕಾರಕ್ಕಾಗಿ ಅವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ ಅವರು, ತುರ್ತು ಸಂದರ್ಭದಲ್ಲಿ ವೈದ್ಯರು ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕು. ಮರಣಶೈಯ್ಯೆಯಲ್ಲಿರುವಾಗ ವೈದ್ಯ ಸಿಬ್ಬಂದಿ ಚಿಕಿತ್ಸೆಗೆ ಧಾವಿಸಿ, ಅಮೂಲ್ಯ ಜೀವ ಉಳಿಸುವಲ್ಲಿ ಶ್ರಮಿಸಬೇಕು. ವಿಶೇಷವಾಗಿ ಹಾವು ಕಡಿತ ಪ್ರಕರಣಗಳಲ್ಲಿ ವೈದ್ಯರು ತುರ್ತು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ರೋಗಿಯು ಯಾವುದೇ ಪರಿಸ್ಥಿತಿ, ಸಂದರ್ಭ, ಆತಂಕದಲ್ಲಿದ್ದರೂ ವೈದ್ಯರು ತಕ್ಷಣದ ಚಿಕಿತ್ಸಾ ಕ್ರಮಕ್ಕೆ ಮುಂದಾಗಬೇಕು. ಶಿಕಾರಿಪುರ ತಾಲೂಕಿನ ಹರಿಗೆಯಲ್ಲಿ ಮೃತ ವ್ಯಕ್ತಿಯ ಕುರಿತು ಕೂಡಲೇ ವರದಿ ನೀಡುವಂತೆಯೂ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದ ಅವರು ಹಾವು ಕಡಿತ ಪ್ರಕರಣಗಳಲ್ಲಿ ನಾಟಿ ವೈದ್ಯರು ಚಿಕಿತ್ಸೆ ನೀಡಬಾರದು. ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯುವಜನರಲ್ಲಿ ತಂಬಾಕು ಬಳಕೆಯನ್ನು ನಿಯಂತ್ರಿಸಲು, ವಿಶ್ವ ತಂಬಾಕು ಮುಕ್ತ ಯುವ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅವಧಿಯಲ್ಲಿ ಜಿಲ್ಲೆಯ ಸುಮಾರು 1000ಕ್ಕೂ ಹೆಚ್ಚಿನ ಶಾಲೆಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದ ಅವರು, ಸಮೀಪದ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರನ್ನು ಕರೆಸಿ, ಉಪನ್ಯಾಸ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ಸೂಚಿಸಿದರು.
ಅಲ್ಲದೇ ಮಂಗನಕಾಯಿಲೆಯಿಂದ ಬಾದಿತರಾಗುವ ಪ್ರದೇಶಗಳಲ್ಲಿ ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚನೆಗಳನ್ನು ನೀಡಬೇಕು. ಶೂ-ಸಾಕ್ಸ್ಗಳನ್ನು ಧರಿಸಿರುವಂತೆ ಹಾಗೂ ಮಂಗನ ಸಾವು ಕಂಡುಬರುವ ಪ್ರದೇಶದಲ್ಲಿ ಓಡಾಟ ನಡೆಸದಂತೆ ಸೂಚನೆ ನೀಡುವ ಮೂಲಕ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಈ ಸಂಬಂಧ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಶಿವಮೊಗ್ಗದ ವಿವಿಧ ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸಲಾಗುವ ರಕ್ತವನ್ನು ನೆರೆಯ ಜಿಲ್ಲೆಗಳಿಗೆ ರವಾನಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಜಿಲ್ಲೆಯ ರೋಗಿಗಳ ಅಗತ್ಯಕ್ಕೆ ತಕ್ಕಂತೆ ರಕ್ತವನ್ನು ನೀಡಿ ಸಹಕರಿಸಬೇಕು. ಅನಗತ್ಯವಾಗಿ ಬೇರೆ ಜಿಲ್ಲೆಗಳಿಗೆ ರಕ್ತ ಸರಬರಾಜು ಮಾಡುವುದನ್ನು ನಿಯಂತ್ರಿಸಬೇಕು ಎಂದವರು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಕುಷ್ಟರೋಗ ಪತ್ತೆ ಅಭಿಯಾನ, ರೇಬೀಸ್ಗೆ ಪ್ರಥಮ ಚಿಕಿತ್ಸೆ ಹಾಗೂ ತಂಬಾಕು ಮುಕ್ತ ಅಭಿಯಾನದ ಕುರಿತು ಬಿತ್ತಿಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರ್ ಐಎಎಸ್ ಅಧಿಕಾರಿ ನಾಗೇಂದ್ರಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ನಾಗರಾಜನಾಯ್ಕ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







