ಉತ್ತರದ ಕಾಶಿ ಕ್ಷೇತ್ರದಂತೆಯೇ ದಕ್ಷಿಣದ ಗೋಕರ್ಣ ಕ್ಷೇತ್ರ ಪರಮ ಪವಿತ್ರ ತೀರ್ಥಸ್ಥಳ ಅದರಲ್ಲೂ, ಕನ್ನಡನಾಡಿನ ಪರಂಪರೆಯಲ್ಲಿ ಅಪೂರ್ವ ಸ್ಥಾನ ಪಡೆದ ಪುಣ್ಯಭೂಮಿ. ರಾಮಾಯಣ ಕಾಲದ ಪುರಾತನ ನಂಟಿರುವ ದೇವಾಲಯ ಇಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿ ಧರ್ಮ ಲಿಂಗ Soccer ಇಲ್ಲಿಯ ಶ್ರೇಷ್ಠತೆ. ಯಾವುದೇ ಬೇಧ ವಿಲ್ಲದೆ ಎಲ್ಲರೂ ಇಲ್ಲಿಯ ಆರಾಧ್ಯ ದೈವ ಮಹಾಬಲೇಶ್ವರನನ್ನು ಗರ್ಭ ಗುಡಿಯಲ್ಲಿಯೇ ಸ್ಪರ್ಶಸಿ ಧನ್ಯತೆ ಪಡೆಯುವ ಅವಕಾಶವಿರುವ ದಕ್ಷಿಣ ಭಾರತದ ಏಕೈಕ ಪುಣ್ಯಕ್ಷೇತ್ರ.
ಇಷ್ಟೆಲ್ಲಾ ಹೆಚ್ಚುಗಾರಿಕೆ ಗಳಿದ್ದರೂ ಗೋಕರ್ಣ ಕ್ಷೇತ್ರ ಹಾಳು ಕೊಂಪೆಯಾಗಿ ಗಬ್ಬು ನಾರುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ, ಪ್ಲಾಸ್ಟಿಕ್ ಬಾಟಲಿಗಳು, ಸೀರೆ ಪಂಚೆ ತುಂಡುಗಳು, ಇಕ್ಕಟ್ಟಾದ ರಸ್ತೆ, ಕಾಲು ಹಾದಿಗಳು, ಸುಣ್ಣ ಬಣ್ಣ ಕಾಣದ ಹಾಳು ಸುರಿಯುವ ಮನೆ ಗೋಡೆಗಳು, ತಟ್ಟಿ ಗುಡಿಸಲಿನಂತೆ ಮುಚ್ಚಿಕೊಂಡಿರುವ ದೇವಾಲಯ ಆವರಣ, ಎಲ್ಲೆಲ್ಲು ಹಬ್ಬಿರುವ ಒಂದು ಬಗೆಯ ಸಿನುಗು ವಾಸನೆ, ರೋಗ ಹರಡಲೆಂಡೆ ಬಾಯ್ದೆರೆದು ನಿಂತಿರುವ ಸಮುದ್ರ ಕಿನಾರೆ, ಹೀಗೆ ಹಲವು ಬಗೆಯ ಅನಿಷ್ಟಗಳನ್ನು ಮೈಗೂಡಿಸಿಕೊಂಡು ನರಳುತ್ತಿದೆ ಗೋಕರ್ಣ ನಾಥನ ನಿಜ ಭೂಮಿ. ಕೇವಲ ಮಹಾಬಲೇಶ್ವರನ ದಯೆಯಿಂದ ಮಾತ್ರ ಉಸಿರಾಡುತ್ತಿದೆ ನಿತ್ಯ ಸಾವಿರಾರು ಭಕ್ತರು ಬರುವ ಈ ದಿವ್ಯ ಸನ್ನಿಧಿ.
ವಿಶೇಷವಾಗಿ ಹಿರಿಯರ ಅಂತ್ಯಸಂಸ್ಕಾರಕ್ಕಾಗಿ ಬರುವ ಭಕ್ತರು ಅಪರಿಮಿತ. ಇಲ್ಲಿ ಸಂಸ್ಕಾರ ಮಾಡಿದರೆ ನೇರವಾಗಿ ಮಾನವನ ಆತ್ಮ ಪರಮಾತ್ಮ ನನ್ನೇ ಸೇರಿ ಮುಕ್ತಿ ದೊರೆಯುತ್ತದೆ ಎಂಬ ಅಚಲ ನಂಬಿಕೆ ಇಲ್ಲಿನ ಮೂಲಶಕ್ತಿ. ಇಂತಹ ಮಹಾಕ್ಷೇತ್ರ ಗಲೀಜಿನ ಕೊಂಪೆಯಗಿರುವುದು ಸರ್ವಥಾ ಸಾಧುವಲ್ಲ.
ಈ ಮಹಾಕ್ಷೇತ್ರವನ್ನು ಸ್ವಚ್ಛವಾಗಿಸಿ, ನಮ್ಮ ಪರಂಪರೆಯನ್ನು ಕಾಪಿಡಬೇಕಾದ್ದು ನಮ್ಮ ಸರ್ಕಾರದ ಹೊಣೆ. ಸ್ಥಳೀಯ ಶಾಸಕರ, ಲೋಕಸಭಾ ಸದಸ್ಯರ ಮತ್ತು ಮಂತ್ರಿಗಳ ಆದ್ಯ ಕರ್ತವ್ಯ. ಆದರೆ ಎಲ್ಲರ ಮರೆವಿನಿಂದ ಶಾಪಗ್ರಸ್ತವಾಗಿದೆ ಈ ಪುಣ್ಯಭೂಮಿ.
ಹಿಂದುತ್ವದ ಹುಲಿಯಂತೆ ಘರ್ಜಿಸುತ್ತಿದ್ದ ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆಯವರ ಕರ್ಮ ಭೂಮಿಯಿದು. ಹಾಲಿ ಕೇಂದ್ರಮಂತ್ರಿಗಳಾದ ಪ್ರಹ್ಲಾದ್ ಜೋಶಿಯವರು ಆಗಾಗ ಪುರುಸೊತ್ತು ಮಾಡಿಕೊಂಡು ಕರ್ನಾಟಕ ಸರ್ಕಾರದ ಮೇಲೆ ಹರಿಹಾಯುವ ಸಮಯದಲ್ಲಿ ಸ್ವಲ್ಪ ಉಳಿಸಿಕೊಂಡು, ಮೋದಿಯವರ ಕಾಶಿ ಮಾದರಿಯಂತೆ ಗೋಕರ್ಣದ ಏಳ್ಗೆಗೆ ಕೈ ಹಾಕಿದರೆ ನಿಜಕ್ಕೂ ಅವರ ಕೀರ್ತಿ ಯಶಸ್ಸು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.
ದಯಮಾಡಿ ನಿಮ್ಮೆಲ್ಲರ ದಿವ್ಯ ನಿರ್ಲಕ್ಷ್ಯದಿಂದ ಒಮ್ಮೆ ಹೊರಬಂದು, ಕನ್ನಡನಾಡಿನ ಈ ಪವಿತ್ರತಾಣವನ್ನು ಕಾಶಿಯಂತೆ ಸುಂದರವಾಗಿಸುವ ಸದ್ಬುದ್ದಿಯನ್ನು ಆ ಮಹಾಬಲೇಶ್ವರ ನೀಡಲೆಂದು ಆಶಿಸುವ.
ಬರಹ ; ಡಾ. ಸೊನಲೆ ಶ್ರೀನಿವಾಸ್, ಹೊಸನಗರ