ಶಿವಮೊಗ್ಗ ; ಸೇವಾ ಪರಿಕಲ್ಪನೆ ಹಾಗೂ ಸಮುದಾಯ ಜೀವನತತ್ವದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಎನ್.ಎಸ್.ಎಸ್ ವಿಶೇಷ ವಾರ್ಷಿಕ ಶಿಬಿರಗಳು ಕಾಲೇಜು ವಿದ್ಯಾರ್ಥಿಗಳಿಗೆ ನೈಜ ಗ್ರಾಮಜೀವನ ಪರಿಚಯಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತವೆ” ಎಂದು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ.ಪ್ರಕಾಶ್ ನಡೂರ್ ಅಭಿಪ್ರಾಯಪಟ್ಟರು.

ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ಅ.01 ರಿಂದ 07ರವರೆಗೆ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರತಿಯೊಬ್ಬರೂ ಸೇವಾಮನೋಭಾವ ಬೆಳೆಸಿಕೊಳ್ಳುವ ಮೂಲಕ ತಮ್ಮ ಜೀವಿತವನ್ನು ಸಾರ್ಥಕಪಡಿಸಿಕೊಳ್ಳಬೇಕು, ವೃತ್ತಿ ಜೀವನದ ಜೊತೆಜೊತೆಗೆ ಗ್ರಾಮೀಣ ಜನ-ಜೀವನವನ್ನು ಉತ್ತಮಪಡಿಸಲು ಶ್ರಮಿಸಬೇಕು” ಎಂದು ಕರೆ ನೀಡಿದರು.
ಕತ್ತಿಗೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಓಬಮ್ಮ, ಸದಸ್ಯರಾದ ಕುಬೇರಪ್ಪ ಕತ್ತಿ, ಶ್ರೀಕಾಂತ, ಕವಿತಾ ಹಾಗೂ ಗ್ರಾಮದ ಹಿರಿಯರಾದ ಡಿ.ಮಂಜಪ್ಪ, ಕರಿಬಸಪ್ಪ, ಕೆ.ಇ.ನಾಗರಾಜ್, ಜಿ. ಸೋಮಣ್ಣ, ಜಯಪ್ಪ ಮತ್ತಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಬಿರದ ಅಂಗವಾಗಿ ಉಚಿತ ಬರಡುರಾಸು ಚಿಕಿತ್ಸಾ ಶಿಬಿರ, ಉಚಿತ ರೇಬೀಸ್ ಲಸಿಕೆ ಹಾಕುವುದು, ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ದಂತಚಿಕಿತ್ಸಾ ಶಿಬಿರ, ಮೇವು ಪೌಷ್ಠೀಕರಣ ತರಬೇತಿ, ರಸಮೇವು ತಯಾರಿಕೆ, ಕೆಚ್ಚಲುಬಾವು ನಿರ್ವಹಣೆ, ಹಾಲಿನ ಉತ್ಪನ್ನಗಳ ತಯಾರಿಕೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಶಿಬಿರಾಧಿಕಾರಿಗಳಾಗಿ ಡಾ.ರವಿಕುಮಾರ್. ಪಿ, ಡಾ.ಯೋಗೇಶ್, ಡಾ.ಗಿರಿಧರ್, ಡಾ.ಮಂಜು ಜಿ.ಯು ಹಾಗೂ ಡಾ. ನಾಗರಾಜ್ ಶಿಬಿರವನ್ನು ಸಂಘಟಿಸಿದ್ದರು.