ಸುಖ ಜೀವನಕ್ಕೆ ಆಹಾರ ಆರೋಗ್ಯ ಆಧ್ಯಾತ್ಮ ಮುಖ್ಯ ; ರಂಭಾಪುರಿ ಶ್ರೀಗಳು

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಮತ್ತು ಆಧ್ಯಾತ್ಮದ ಕೊಡುಗೆ ಅಪಾರ. ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ತೃಪ್ತಿಯಿಲ್ಲ. ಸುಖದ ಬದುಕಿಗೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮ ಮುಖ್ಯವೆಂದು ಬಾಳೆಹೊನ್ನೂರು (Balehonnuru) ಶ್ರೀ ರಂಭಾಪುರಿ (Rambhapuri) ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಕಾಲೇಜ ಆವರಣದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಐಟಿಐ ಕಾಲೇಜಿನ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಶ್ರಮವಿಲ್ಲದೇ ಬಂದ ಸಂಪತ್ತು ಬಹು ಕಾಲ ಉಳಿಯಲಾರದು. ಸುಖ ಸಮೃದ್ಧಿಗಳು ಬೆಳೆದಂತೆ ಸತ್ಕೃತಿ ಸಂಸ್ಕೃತಿ ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆಯುತ್ತಿದ್ದರೂ ಹೃದಯ ಪರಿವರ್ತನೆ ಇಲ್ಲದಿರುವುದನ್ನು ಕಾಣುತ್ತೇವೆ. ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾಗಿರುವ ಗಟ್ಟಿತನ ಬೇಕು. ವೀರಶೈವ ಧರ್ಮ ಸಂವಿಧಾನಕ್ಕೆ ವಿಶ್ವ ಬಂಧುತ್ವದ ಆದರ್ಶ ಮೌಲ್ಯ ತಂದಿತ್ತವರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು. ಅವರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತದಲ್ಲಿ ಏನೆಲ್ಲವೂ ಅಡಗಿದೆ. ಯುಗ ಯುಗಗಳ ಇತಿಹಾಸವುಳ್ಳ ಪಂಚಾಚಾರ್ಯರು ಜಾತಿ ಮತಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬದುಕಿಗೆ ಶ್ರೀಕಾರ ಹಾಕಿದ ಆಚಾರ್ಯ ಶ್ರೇಷ್ಠರು. ಅಂಥ ಮಹಿಮಾನ್ವಿತರ ಯುಗಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಸಂಸ್ಥಾಪಕರಾದ ವಿಘ್ನೇಶ್ವರಯ್ಯ ಸೋಲಾಪುರ ಅವರ ಪರಿಶ್ರಮದ ಸಾಧನೆ ಬಹು ದೊಡ್ಡದು. ಶ್ರೀ ಜಗದ್ಗುರು ಪಂಚಾಚಾರ್ಯರ ಹೆಸರಿನಲ್ಲಿ ಮೊಟ್ಟ ಮೊದಲು ಕೈಗಾರಿಕಾ ಕೇಂದ್ರ ಸ್ಥಾಪಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಿಕೊಂಡು ಬರುತ್ತಿರುವುದು ಇನ್ನಿತರರಿಗೆ ಮಾದರಿಯಾಗಿದೆ ಎಂದರು.

ವೀರಶೈವ ಸಮಾಜದ ಧುರೀಣ ಎನ್.ಜೆ.ರಾಜಶೇಖರ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಅರಿವಿನ ಆದರ್ಶ ಬದುಕು ನಮ್ಮದಾಗಬೇಕು. ಕಾಯಕವೇ ಕಳಾಚೈತನ್ಯವಾಗಿ ಜೀವ ಜಗತ್ತಿನ ಉನ್ನತಿಗೆ ಸ್ಫೂರ್ತಿಯಾಗಿದೆ. ಆಚಾರ್ಯರು ತೋರಿದ ಸತ್ಪಥದಲ್ಲಿ ಮುನ್ನಡೆದು ಭಾರತೀಯ ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು.

ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ ಮಾತನಾಡಿ, ಶಿವಮೊಗ್ಗದ ಹರಕೆರೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ರಂಭಾಪುರಿ ಜಗದ್ಗುರುಗಳ ವಾಸ್ತವ್ಯದ ಗುರುಭವನದ ಉದ್ಘಾಟನೆ ಜುಲೈ 3 ರಂದು ಉದ್ಘಾಟನೆಗೊಳ್ಳಲಿದೆ. ಈ ಸಂಬಂಧವಾಗಿ ಜೂನ್ 20ರಂದು ಪೂರ್ವಭಾವಿ ಸಭೆ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಕ್ಷೇತ್ರದ ಶಾಸಕ ಚನ್ನಬಸಪ್ಪ ಎಸ್.ಎನ್. ಇವರು ಎಸ್‌ಜೆಪಿ ಐಟಿಐ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಸಂಘಟನೆಯ ಶಕ್ತಿ ಅದ್ಭುತ. ಸಂಘಟನೆ ಮತ್ತು ಪ್ರಾಮಾಣಿಕ ಪ್ರಯತ್ನವಿಲ್ಲದೇ ಬದುಕು ಬಲಹೀನಗೊಳ್ಳುತ್ತಿವೆ. ಅದಕ್ಕೆ ಅವಕಾಶ ಕೊಡದೇ ಪ್ರಾಮಾಣಿಕವಾಗಿ ಶ್ರಮಿಸುವ ಅಗತ್ಯವಿದೆ ಎಂದರು.

ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮತ್ತು ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ-ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವ ಸಿದ್ಧಾಂತಗಳ ಬಗೆಗೆ ಉಪದೇಶವನ್ನಿತ್ತರು. ಹೊನ್ನಾಳಿಯ ಎಂ.ವಿ.ವೀರಯ್ಯ ಇವರು ನುಡಿ ನಮನ ಸಲ್ಲಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ಪರಂಪರೆ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಬಿ.ಟಿ.ಶೇಖರಪ್ಪ ಪಾಲ್ಗೊಂಡಿದ್ದರು. ಅತಿ ಹೆಚ್ಚು ಅಂಕ ಪಡೆದ ಪಿಯುಸಿ ವಿದ್ಯಾರ್ಥಿನಿ ಸಿಂಚನ ಜಿ.ಎಂ. ಹಾಗೂ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಾದ ಷಗುಣ ಜಂಬೂರ ಮತ್ತು ಅಮೃತ ಹೆಚ್.ಪಿ. ಇವರಿಗೆೆ ಮತ್ತು ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ- ಉಷಾರಾಣಿ ದಂಪತಿಗಳ 30ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಜಗದ್ಗುರುಗಳಿಂದ ಅಶೀರ್ವಾದ ಪಡೆದರು. ವಿಘ್ನೇಶ್ವರಯ್ಯ ಸೋಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿವಮೊಗ್ಗ ಜಿಲ್ಲಾ ಜಂಗಮ ಮಹಿಳಾ ಸಮಾಜದವರಿಂದ ವೇದಘೋಷ, ಶ್ರೀಮತಿ ಸಹನಾ-ಡಾ.ಭಾವನಾ ಸೋಲಾಪುರ ಇವರಿಂದ ಪ್ರಾರ್ಥನೆ ಜರುಗಿತು. ಮಂಜುನಾಥ ಎಸ್. ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ವೇದಘೋಷ, ಮಂಗಲವಾದ್ಯ, ಪೂರ್ಣ ಕಲಶ ಕುಂಭಗಳೊಂದಿಗೆ ಬರಮಾಡಿಕೊಂಡರು. ಸಹಸ್ರಾರು ಜನರು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಶ್ರೀ ರಂಭಾಪುರಿ ಜಗದ್ಗುರುಗಳು ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿದರು. ಯುಗಮಾನೋತ್ಸವ ಅಂಗವಾಗಿ ವೀರಶೈವ ವಧು-ವರರ ಸಮಾವೇಶ, ಟಿ.ಎಂ.ಇ.ಎಸ್.ಆಯುರ್ವೇದ ಮಹಾವಿದ್ಯಾಲಯದ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ಮತ್ತು ಡಾ.ನಂದೀಶ ಹಿರೇಮಠ ಸಾರಥ್ಯದಲ್ಲಿ ಐಟಿಐ ಹಿರಿಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಜರುಗಿದವು.

Leave a Comment

error: Content is protected !!