ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ ; ಆರಗ ಜ್ಞಾನೇಂದ್ರ

Written by Malnadtimes.in

Published on:

WhatsApp Group Join Now
Telegram Group Join Now

ಶಿವಮೊಗ್ಗ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜನರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ವಿಶೇಷವಾಗಿ ಪೊಲೀಸರಿಗೇ (Police) ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ. ಈ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದೆ ಎಂದರು.

ನಿನ್ನೆ ಚನ್ನಗಿರಿಯಲ್ಲಿ ಪ್ರಕರಣವೊಂದರಲ್ಲಿ ಲಾಕಪ್ ಡೆತ್ ಎಂದು ಆರೋಪಿಸಿ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ವಾಹನಗಳನ್ನು
ಧ್ವಂಸಗೊಳಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಯಾಗಿದೆ ಎಂದರು.

ಹಿಂದೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಮತ್ತು ಹುಬ್ಬಳ್ಳಿ ಗಲಭೆ ಸಂದರ್ಭದಲ್ಲಿ ಅದನ್ನು ಮಾಡಿದವರ ಪರ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ತಾಳಿದ್ದಲ್ಲದೇ ಅವರು ಅಮಾಯಕರು ಎಂದು ಅವರ ಮೇಲಿನ ಕೇಸನ್ನು ವಿತ್ ಡ್ರಾ ಮಾಡಲು ಪತ್ರ ನೀಡಿತು. ಇದರಿಂದ ಯಾವ ಸಂದೇಶ ಹೋಗಿದೆ ಎಂದು ಈಗ ಗೊತ್ತಾಗುತ್ತಿದೆ. ಅಪರಾಧಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಅಶಾಂತಿಗೆ ಕಾರಣವಾಗುತ್ತದೆ ಎಂದರು.

ವಿಧಾನಸೌಧದ ಒಳಗೆಯೇ ಪಾಕಿಸ್ತಾನ ಜಿಂದಾಬಾದ್ ಎಂದರೆ ಈ ಸರ್ಕಾರ ಅದನ್ನು ನಿರಾಕರಿಸುತ್ತದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಒಪ್ಪಿಕೊಳ್ಳುತ್ತದೆ. ಮೊನ್ನೆ ಕೊಪ್ಪದಲ್ಲಿ ಕೂಡ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಆದರೂ ಈ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಪ್ರಕರಣ ನಡೆದಾಗಲೂ ಗೃಹ ಸಚಿವರು ಅದು ಪ್ರೇಮ ಪ್ರಕರಣ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ. ಯಾದಗಿರಿಯಲ್ಲಿ ರೊಟ್ಟಿ ಕೇಳಲು ಹೋದ ದಲಿತನ ಕೊಲೆಯಾಗುತ್ತದೆ. ಈ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಬಹಳಷ್ಟು ಜಾಸ್ತಿಯಾಗಿದ್ದು, ಒಂದು ವರ್ಷದಲ್ಲಿ 1,87,742 ವಿವಿಧ ಘೋರ ಅಪರಾಧ ಪ್ರಕರಣ ಜರುಗಿವೆ. ಮಾದಕ ವಸ್ತು ಸಾಗಾಟ, ಮಾರಾಟ, ರೇವ್ ಪಾರ್ಟಿಗಳು ಎಗ್ಗಿಲ್ಲದೇ ನಡೆಯು ತ್ತಿವೆ. ಈ ಸರ್ಕಾರ ಬದುಕಿದೆಯಾ ಎಂಬ ಸಂಶಯ ಕಾಡುತ್ತಿದೆ ಎಂದರು.

ಆಂಧ್ರದಿಂದ ಇಲ್ಲಿಗೆ ಬಂದು ರೇವ್ ಪಾರ್ಟಿ ನಡೆಸುತ್ತಾರೆ. ವಿವಿಧ ಮಾದಕ ವಸ್ತುಗಳನ್ನು ಬಹಿರಂಗವಾಗಿ ಸೇವನೆ ಮಾಡುತ್ತಾರೆ. ಸ್ಥಳೀಯರು ಒತ್ತಡ ಹೇರಿದ ಮೇಲೆ ಬೇರೆ ಪೊಲೀಸರು ಬಂದು ಕೇಸ್ ದಾಖಲಿಸುತ್ತಾರೆ. ತುಷ್ಠೀಕರಣದ ರಾಜಕಾರಣದಿಂದ ಕರ್ನಾಟಕ ಅಶಾಂತಿಯ ತೋಟವಾಗಿದೆ. ಎಲ್ಲಾ ಶಕ್ತಿಗಳು ತಲೆ ಎತ್ತುತ್ತಿವೆ. ದೇಶದ್ರೋಹಿಗಳು ಇದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಕಲಿ ಚಟುವಟಿಕೆಗಳು ಗರಿಗೆದರಿವೆ. ಕ್ರೈಂಗೂ ಕಾಂಗ್ರೆಸ್ ಗೂ ಬಾಂಧವ್ಯವಿದೆ ಎಂದರು.

ಗೃಹ ಸಚಿವರು ಸರ್ಕಾರದ ಬಗ್ಗೆ ಟೀಕೆ ಮಾಡಿದರೆ ಟೀಕೆ ಮಾಡಬೇಡಿ. ಬೆಂಗಳೂರು ಬ್ರ್ಯಾಂಡ್ ಗೆ ಹೊಡೆತ ಬೀಳುತ್ತದೆ. ಬಂಡವಾಳಶಾಹಿಗಳು ಬರುವುದಿಲ್ಲ ಎನ್ನುತ್ತಾರೆ. ಇವರ ದುರಾಡಳಿತದಿಂದ ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪೊಲೀಸರ ಮಾನಸಿಕತೆ ಬದಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ರೌಡಿಶೀಟ್ ಓಪನ್ ಮಾಡಿ ವಿವಿಧ ಸೆಕ್ಷನ್ ಗಳನ್ನು ಹಾಕಿ ಜೈಲಿಗಟ್ಟುವ ಕಾರ್ಯ ನಡೆಯುತ್ತಿದೆ ಎಂದರು.

ಗೋವಧೆ ಮಸೂದೆ ಜಾರಿಯಲ್ಲಿದ್ದರೂ ಸಾಕ್ಷಿ ಸಮೇತ ಅದನ್ನು ಹಿಡಿದುಕೊಟ್ಟರೆ ಆರೋಪಿಗಳನ್ನು ಹಿಡಿದವರ ಮೇಲೆಯೇ 307 ಕೇಸ್ ಹಾಕುತ್ತಿದ್ದಾರೆ. ರಾಜಕೀಯ ಸೇಡಿನ ಮನೋಭಾವದಿಂದ ಸರ್ಕಾರ ವರ್ತಿಸುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಶಾಂತಿಯುತ ಬದುಕಿಗೆ ತೊಂದರೆಯಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ ನಮ್ಮ ಪಕ್ಷ ಮತ್ತು ನಾಯಕರು ಇದನ್ನು ಖಂಡಿಸಿದ್ದಾರೆ ಮತ್ತು ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ,ರತ್ನಾಕರ್ ಶೆಣೈ, ಕೆ.ವಿ. ಅಣ್ಣಪ್ಪ, ಭವಾನಿರಾವ್ ಮೋರೆ ಇದ್ದರು.

Leave a Comment

error: Content is protected !!