ಜುಲೈನಲ್ಲಿ ‘ಗೌರಿ’ ಸಿನೆಮಾ ಬಿಡುಗಡೆ ; ಇಂದ್ರಜಿತ್ ಲಂಕೇಶ್

Written by Malnadtimes.in

Published on:

WhatsApp Group Join Now
Telegram Group Join Now

Shivamogga | ನನ್ನ ನಿರ್ದೇಶನ, ನಿರ್ಮಾಣದ ಬಹು ನಿರೀಕ್ಷಿತ ಚಿತ್ರ “ಗೌರಿ” ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೌರಿ ಚಿತ್ರಕ್ಕಾಗಿ ನನ್ನ ಸಿನಿಮಾ ಜೀವನದ ಅನುಭವವನ್ನು ಧಾರೆ ಎರೆದಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಹೊಸಬರಿಗೆ ಇಲ್ಲಿ ಅವಕಾಶ ಕೊಟ್ಟಿದ್ದೇನೆ. ಕನಸುಗಣ್ಣಿನ ಪ್ರತಿಭೆಗಳು ಈ ಚಿತ್ರದ ಮೂಲಕ ಅನಾವರಣಗೊಂಡಿದ್ದಾರೆ.

ನಾಯಕನ ಪಾತ್ರದಲ್ಲಿ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯ ಪಾತ್ರದಲ್ಲಿ ಕಿರುತೆರೆಯ ನಟಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ ಎಂದರು.

ಗೌರಿ ಸಿನಿಮಾ ನನ್ನ ಅಕ್ಕನ ಜೀವನ ಕುರಿತ ಚಿತ್ರವಲ್ಲ. ಅದು ಅವಳ ಆತ್ಮಕತೆಯೂ ಅಲ್ಲ, ಗೌರಿ ಎಂಬುವುದು ಒಂದು ಪಾತ್ರ ಮಾತ್ರ. ಇದು ನೈಜ ಘಟನೆಯನ್ನು ಆಧಾರಿಸಿದೆ. ಅಕ್ಕನ ನೆನಪಿನಲ್ಲಿ ಈ ಹೆಸರು ಇಟ್ಟಿದ್ದೇನೆ. ಹಾಗೆ ನೋಡಿದರೆ, ಅಕ್ಕ ಗೌರಿ ಕುರಿತ ಚಲನಚಿತ್ರ ಮಾಡುವುದು ತುಂಬ ಕಷ್ಟ ಎಂದು ಸ್ಪಷ್ಟನೆ ನೀಡಿದರು.

ಖಂಡಿತ ಈ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ಈ ಸಿನಿಮಾ ಮಾಡಿರುವೆ, ಬಹುದೊಡ್ಡ ತಾರಗಣ ಇದರಲ್ಲಿದೆ. ಹಳಬರು ಹೊಸಬರು ಸೇರಿದಂತೆ ಸುಮಾರು 70 ಜನರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಅಕುಲ್ ಬಾಲಾಜಿ ಹೀಗೆ ಪಟ್ಟಿ ದೊಡ್ಡದಿದೆ. ಕರ್ನಾಟಕದಲ್ಲಿಯೇ ಚಿತ್ರಿಕರಣ ಮಾಡಿದ್ದೇನೆ. ಅದರಲ್ಲಿ ಚಿಕ್ಕಮಗಳೂರು ಕೂಡ ಒಂದು ಚಿಕ್ಕಮಗಳೂರಿನ ಆ ನಿಸರ್ಗವನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆ ನಮ್ಮ ತವರೂರು. ನಮ್ಮ ಮೂಲ ಬೇರುಗಳು ಇಲ್ಲಿವೆ. ಈ ಜಿಲ್ಲೆಯ ಜನರ ಆಶೀರ್ವಾದ ನನ್ನ ಪುತ್ರ ಮೇಲೆ ಬೇಕಿದೆ. ಅದೇ ಕಾರಣಕ್ಕೆ ಗೌರಿ ಚಿತ್ರದ ಪ್ರಚಾರ ಕಾರ್ಯವನ್ನು ಮೊಟ್ಟ ಮೊದಕ ಬಾರಿಗೆ ಶಿವಮೊಗ್ಗದಿಂದಲೇ ಆರಂಭಿಸುತ್ತಿದ್ದೇವೆ. ಲಂಕೇಶ್ ಅವರಂತಹ ಶ್ರೇಷ್ಟ ಪರ್ತಕರ್ತ, ಲೇಖಕ, ಚಿತ್ರ ನಿರ್ದೇಶಕನನ್ನು ಕೊಟ್ಟ ನೆಲವಿದು. ಅವರ ಪುತ್ರನಾಗಿ ನಾನು ತಂದೆಯವರ ಆಶೀರ್ವಾದ, ಮಾರ್ಗದರ್ಶನದ ಮೂಲಕವೇ ಪತ್ರಕರ್ತನಾಗಿ, ಚಿತ್ರ ನಿರ್ದೇಶಕನಾಗಿ, ನಿರ್ಮಾಪಕ ನಾಗಿ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತಿದೆ. ಅಂತೆಯೇ ನನ್ನ ಪುತ್ರ ಸಮರ್ಜಿತ್ ಕೂಡ ಚಿತ್ರ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದರು.

ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿಬಂದಿದೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ ಎಂದು ಮನವಿ ಮಾಡಿದರು.

ಇನ್ನು ತಾಂತ್ರಿಕತೆಯಲ್ಲೂ ಅದ್ದೂರಿಯಾಗಿ ಚಿತ್ರ ನಿರ್ಮಾಣವಾಗಿದೆ. ಕೆ ಇಬ್ಬರು ಛಾಯಾಗ್ರಾಹಕರು, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೋರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು, ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ ಎಂದರು.

ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. 

ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಜುಲೈ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದರು.

ನಟ ಸಮರ್ಜಿತ್ ಲಂಕೇಶ್, ನಟಿ ಸಾನ್ಯಾ ಅಯ್ಯರ್ ಮಾತನಾಡಿ, ಈ ಚಿತ್ರಕ್ಕೆ ಬಹುದೊಡ್ಡ ತಾರಗಣವಿದೆ. ಒಳ್ಳೆಯ ಸಂಗೀತವಿದೆ, ಉತ್ತಮ ಸಂದೇಶವಿದೆ, ಕನ್ನಡ ಚಿತ್ರವನ್ನು ನೋಡುವುದರ ಮೂಲಕ ನಮ್ಮನ್ನು ಪ್ರೋತ್ಸಹಿಸಬೇಕು ಎಂದರು.

Leave a Comment

error: Content is protected !!