HOSANAGARA | ಕುಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯೊಂದು ತನ್ನ ಗುಣಮಟ್ಟಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ತಾಲೂಕಿನ ಪುರಪ್ಪೆಮನೆ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯು ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೆ ಭಾಜನವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪತಾಂಜಲಿ ಅವರಿಗೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಂಯುಕ್ತವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಗ್ರಾಮದ ಸಮಸ್ತ ನಾಗರೀಕರ ಪರವಾಗಿ ಡಾ. ಪತಾಂಜಲಿ ಅವರನ್ನು ಶಾಸಕ ಬೇಳೂರು ಅಭಿನಂದಿಸಿದರು.
ಈ ವೇಳೆ ಅವರು ಮಾತನಾಡಿ, ಡಾ. ಪತಾಂಜಲಿ ಅವರ ಸೇವೆ ಸ್ವಾಗತರ್ಹ. ಉಳಿದಿರುವ ಅವರ ಮೂರು ವರ್ಷದ ಸೇವೆಯಲ್ಲಿ ಅವರು ಕನಸು ನನಸಾಗಿಸಲು ‘ಪಂಚಕರ್ಮ ಚಿಕಿತ್ಸೆ’ ನೂತನ ಘಟಕ ಆರಂಭಕ್ಕೆ ಅಗತ್ಯವಿರುವ ಅನುದಾನ ನೀಡುವ ಭರವಸೆ ನೀಡಿದರು.
ಗ್ರಾ.ಪಂ. ಮಾಜಿ ಸದಸ್ಯ, ಅಭಿನಂದನಾ ಸಮಾರಂಭದ ಅಯೋಜಕ ಎ.ಎನ್. ಮೃತ್ಯುಂಜಯ ಪ್ರಾಸ್ಥಾವಿಕ ಮಾತನಾಡಿ, ಡಾ. ಪತಾಂಜಲಿ ಅವರ ತಂದೆ ಸಹ ಇದೇ ಊರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆಗಳಿದ್ದರು. ಆ ಕಾಲಕ್ಕೆ ಒಂದು ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕೆಂಬ ತುಡಿತ ಅವರಲ್ಲಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೆ, ಡಾ. ಪತಾಂಜಲಿ ವೈದ್ಯರಾಗಿ ಸೇವೆಗೆ ಸೇರಿ ಈ ಗ್ರಾಮಕ್ಕೆ ಬಂದ ಬಳಿಕ ಅಪ್ಪನ ಕನಸನ್ನು ಪೂರ್ಣಗೊಳಿಸಿದರು. ಕಾರಣ ಅವರಲ್ಲಿನ ಸೇವಾ ಮನೋಭಾವ, ಶಿಸ್ತು, ಜನಪರ ಕಾಳಜಿಯೇ ಕಾರಣ. ಇಡೀ ಜನಸಮೂಹವನ್ನೇ ಕೆಲವೇ ವರ್ಷಗಳಲ್ಲಿ ತಮ್ಮದಾಗಿಸಿಗೊಂಡು ಪರಿಸರ, ಯೋಗ, ಆರೋಗ್ಯ, ಓದು, ಆಯುರ್ವೇದ ಸೇರಿದಂತೆ ಹಲವು ಹೊಸ ಹೊಸ ಪ್ರಯೋಗಗಳ ಅನುಷ್ಟಾನಕ್ಕೆ ಅವರು ಮುನ್ನುಡಿ ಬರೆಯುವಲ್ಲಿ ಯಶಸ್ವಿ ಆದರು. ಅದರ ಫಲವೇ ಈ ಆಯುರ್ವೇದ ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲಿ ಹಲವು ಪ್ರಥಮಗಳ ಸೃಷ್ಠಿಗೆ ಸಾಕ್ಷಿಯಾಗಿ ನಿಂತಿದೆ. ಅಲ್ಲದೆ, ರಾಷ್ಟಿçÃಯ ಗುಣಮಟ್ಟದ ಆಸ್ಪತ್ರೆ ಎಂಬ ಪ್ರಶಸ್ತಿಗೂ ಇಂದು ಭಾಜನವಾಗಿದೆ. ಈ ಎಲ್ಲಾ ಕಾರ್ಯಕ್ಕೂ ಡಾ. ಪತಾಂಜಲಿ ಅವರ ನಿರಂತರ ಪರಿಶ್ರಮವೇ ಕಾರಣವೆಂದರು.
ಶಿಕ್ಷಕ ಗಣೇಶ್ ಮಾತನಾಡಿ ಡಾ. ಪತಾಂಜಲಿ ಅವರ ಜನಪರ ಕಾಳಜಿಯಿಂದಾಗಿ ಶಾಲೆ, ಪರಿಸರ, ಶುಚಿತ್ವ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಆಗಿವೆ. ಕಳೆದ ಬೇಸಿಗೆ ರಜೆಯಲ್ಲಿ ಎರಡು ತಿಂಗಳು ನಿರಂತರವಾಗಿ ದಿನಪತ್ರಿಕೆ ಓದುವ ವಿದ್ಯಾರ್ಥಿಗಳಿಗೆ ತಲಾ ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ 75 ವಿದ್ಯಾರ್ಥಿಗಳಲ್ಲಿ ಆರು ಮಂದಿ ಬಹಮಾನಕ್ಕೆ ಅರ್ಹರಾಗಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಪ್ಪೆಮನೆ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಿ.ಎನ್. ಕೃಷ್ಣಮೂರ್ತಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿ, ಜಿಲ್ಲಾ ಅಯುಷ್ ಅಧಿಕಾರಿ ಡಾ. ಲಿಂಗರಾಜ್ ಹಿಂಡಸಗಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ್ ಉಪಸ್ಥಿತರಿದ್ದರು.
ಪೂರ್ಣಿಮಾ ಕಿರಣ್ ಸ್ವಾಗತಿಸಿ, ಶಿಕ್ಷಕ ಪ್ರಸನ್ನ ಕುಮಾರ್ ನಿರೂಪಿಸಿದರು. ಮುಖ್ಯ ಶಿಕ್ಷಕ ನಾಗರಾಜ್ ವಂದಿಸಿದರು.
ಗ್ರಾಮೀಣ ಭಾಗದ ಆಯುರ್ವೇದ ವೈದ್ಯನೋರ್ವ ತಮ್ಮ ಸೇವೆಯ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿರುವುದು ಅವರ ಹಾಗೂ ಸಾರ್ವಜನಿಕ ನಡುವಿನ ಸ್ವಾಸ್ಥ್ಯದ ಧ್ಯೋತಕದಂತೆ ಬಿಂಬಿಸುತ್ತಿದೆ. ನಮ್ಮ ಪುರಾತನ ಆಯುರ್ವೇದ ವೈದ್ಯ ಪದ್ದತಿ ಇಂದಿಗೂ ಜೀವತವಾಗಿರಲು ಡಾ. ಪತಾಂಜಲಿ ಅವರಂಥ ಹಲವು ವೈದ್ಯರ ನಿಸ್ವಾರ್ಥ ಸೇವೆಯೇ ಕಾರಣ. ಆಧುನಿಕ ಯುಗದಲ್ಲಿ ತ್ವರಿತ ರೋಗ ನಿವಾರಣೆಗೆ ಜನರು ಅಲೋಪತಿ ವೈದ್ಯ ಪದ್ದತಿಗೆ ಮಾರು ಹೋಗಿರುವ ಈ ಸಂದರ್ಭದಲ್ಲಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಆಯುರ್ವೇದ ಪದ್ದತಿಯಲ್ಲಿ ಜನಸೇವೆ ಮಾಡಿ ಹೆಸರಾಗಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.
– ಡಾ. ಆರ್. ಎಂ. ಮಂಜುನಾಥಗೌಡ, ಮಲೆನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ