ಅನುಮತಿ ಇಲ್ಲದೆ ಕೆರೆ ಹೂಳು ತೆಗೆದರೆ ಕಾನೂನು ಕ್ರಮ ; ಶಿವಮೊಗ್ಗ ಡಿಸಿ

Written by Malnadtimes.in

Updated on:

WhatsApp Group Join Now
Telegram Group Join Now

ಶಿವಮೊಗ್ಗ : ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಕೆರೆಯ (Lake) ಹೂಳು ಹಾಗೂ ಮಣ್ಣನ್ನು ಸೂಕ್ತ ಪ್ರಾಧಿಕಾರದ ಅನುಮತಿ ಇಲ್ಲದೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ (Shivamogga DC) ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಕೆರೆ ಹೂಳು ಹಾಗೂ ಮಣ್ಣಿನ ಅನಧಿಕೃತ ಸಾಗಾಣಿಕೆ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸುವುದಾಗಿ ಸೂಚಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿಗಳಿಗೆ, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ  ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮ ಪಂಚಾಯತ್‌ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಶಿವಮೊಗ್ಗ
ಶಿವಮೊಗ್ಗ

ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳು ಅರ್ಜಿಯನ್ನು ಪರಿಶೀಲಿಸಿ, ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು/ಮಣ್ಣಿನ ಅಂದಾಜು ಪಟ್ಟಿ ತಯಾರಿಸಿ, ಕೆರೆಯ ಯಾವ ಭಾಗದಲ್ಲಿ ಹೂಳು/ಮಣ್ಣನ್ನು ಎತ್ತುವಳಿ ಮಾಡತಕ್ಕದ್ದು ಎಂಬ ನಕಾಶೆ ಉಳ್ಳ ವಿಸ್ತೃತ ಯೋಜನಾ ವರದಿಯೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸುತ್ತವೆ.

ಗ್ರಾಮ ಪಂಚಾಯಿತಿಯ ಪ್ರಾಧಿಕಾರ ಉಳ್ಳ ಕೆರೆಗಳಲ್ಲಿ ಹೂಳು/ಮಣ್ಣು ತೆಗೆಯಲು ಅನುಮತಿ ಕೋರಿದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅನುಮೋದನೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಡಿ.ಪಿ.ಆರ್.‌ ತಯಾರಿಸಿಕೊಂಡು ಪ್ರಸ್ತಾವನೆಯನ್ನು ಗಣಿ, ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಬೇಕು.

ಸೂಕ್ತ ತೀರುವಳಿಗಳು ಹಾಗೂ ದಾಖಲಾತಿಗಳೊಂದಿಗೆ ಸ್ವೀಕೃತಗೊಂಡ ಪ್ರಸ್ತಾವನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲಿಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994, ತಿದ್ದುಪಡಿ ನಿಯಮಗಳು 2023 ರಂತೆ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ ಮತ್ತು ಇನ್ನಿತರೆ ಶುಲ್ಕಗಳನ್ನು ನಿಗಧಿಪಡಿಸಿ, ಕಾರ್ಯಾದೇಶ ನೀಡಿ, ಕಾರ್ಯಾದೇಶವನ್ನು ಐ.ಎಲ್.ಎಂ.ಎಸ್.‌ ತಂತ್ರಾಂಶದಲ್ಲಿ ನೋಂದಣಿ ಮಾಡಿ ಮಣ್ಣು ಸಾಗಾಣಿಕೆ ಮಾಡಲು ಖನಿಜ ಸಾಗಾಣಿಕೆ ಪರವಾನಿಗೆ ವಿತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶಿವಮೊಗ್ಗ
ಶಿವಮೊಗ್ಗ

ಹೂಳು ಮತ್ತು ಮಣ್ಣು ತೆಗೆಯಲು ಈ ವಿಧಾನವನ್ನು ಕ್ರಮಬದ್ಧವಾಗಿ ಪಾಲನೆ ಮಾಡದೇ, ನಿಯಮಾನುಸಾರ ಕಾರ್ಯಾದೇಶ ಪಡೆಯದೇ, ಜಿಲ್ಲೆಯಾದ್ಯಂತ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ ಅಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ನಿಯಮಾನುಸಾರ ಹಾಗೂ ಕ್ರಮಬದ್ಧವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾರ್ಯಾನುಮತಿ ಪಡೆದು ಕೆರೆಗಳಲ್ಲಿ ಹೂಳು/ಮಣ್ಣು ಎತ್ತುವಳಿ ಕೈಗೊಳ್ಳುವಂತೆ, ತಪ್ಪಿದಲ್ಲಿ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಹಾಗೂ ಸಾಗಾಣಿಕೆಯಲ್ಲಿ ತೊಡಗಿರುವ ವಾಹನಗಳನ್ನು ಜಪ್ತಿ ಮಾಡಿ ದಂಡ ಸಹಿತವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೆರೆ ಪ್ರಾಧಿಕಾರಗಳಿಗೆ ತಿಳಿಸಿದರು.

ಶಿವಮೊಗ್ಗ
ಶಿವಮೊಗ್ಗ

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕಾರ್ಯಪ್ಪ, ಹಿರಿಯ ಭೂ ವಿಜ್ಞಾನಿ ನವೀನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಆಯನೂರು ಮಂಜುನಾಥ್ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ ; ಬೇಳೂರು ಗೋಪಾಲಕೃಷ್ಣ

Arecanut Today Price | 17.05.2024 | ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್…

Leave a Comment

error: Content is protected !!