RIPPONPETE | ನಾಡಕಛೇರಿ ಸ್ಥಳಾಂತರ, ಸಾರ್ವಜನಿಕರ ಪರದಾಟ !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಪಟ್ಟಣದ ನಾಡಕಛೇರಿ ಕಟ್ಟಡ ಶಿಥಿಲವಾಗಿರುವ ಹಿನ್ನಲೆಯಲ್ಲಿ ಹಳೆ ಸಂತೆ ಮಾರುಕಟ್ಟೆಯಲ್ಲಿರುವ ಅಂಬೇಡ್ಕರ್ ಸಭಾಭವನಕ್ಕೆ ಸ್ಥಳಾಂತರಿಸಲಾಗಿದ್ದು ಈ ಸ್ಥಳ ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಶಿವಮೊಗ್ಗ ರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ನಾಡಕಛೇರಿ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳಿನಿಂದ ಹಳೇ ಸಂತೆ ಮಾರ್ಕೆಟ್ ಬಳಿಯಿರುವ ಅಂಬೇಡ್ಕರ್ ಸಭಾಭವನಕ್ಕೆ ಕಛೇರಿಯನ್ನು ವರ್ಗಾಯಿಸಲಾಗಿದ್ದು ಈ ಸ್ಥಳ ಅವೈಜ್ಞಾನಿಕವಾಗಿದ್ದು ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ ಕೂಡಲೇ ಸಂಬಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾಡಕಛೇರಿ ಕಟ್ಟಡ ತುಂಬಾ ಶಿಥಿಲಗೊಂಡಿರುವುದರಿಂದ ಅದನ್ನು ದುರಸ್ತಿ ಪಡಿಸುವವರೆಗೂ ರಿಪ್ಪನ್‌ಪೇಟೆಯ ಮುಖ್ಯ ರಸ್ತೆಯಲ್ಲಿ ಯಾವುದಾದರು ಕಟ್ಟಡದಲ್ಲಿ ಕಛೇರಿಯನ್ನು ಸ್ಥಳಾಂತರ ಮಾಡುವ ಮೂಲಕ ಜನಸಾಮನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಮಸ್ಯೆಗಳ ಕೂಪವಾಗಿರುವ ಹೊಸ ಕಛೇರಿ :

ಹಳೇ ಸಂತೆ ಮಾರುಕಟ್ಟೆಯಲ್ಲಿರುವ ಅಂಬೇಡ್ಕರ್ ಸಭಾಭವನದಲ್ಲಿ ಕಚೇರಿ ಸ್ಥಳಾಂತರಗೊಂಡಿದ್ದು ಈ ಕ‌ಚೇರಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಹಾಗೂ ನೌಕರರು ಪರದಾಡುವಂತಾಗಿದೆ.

ಶಿಥಿಲಗೊಂಡ ರಿಪ್ಪನ್‌ಪೇಟೆ ನಾಡ ಕಚೇರಿ ಕಟ್ಟಡ

ಈ ಕಟ್ಟಡದ ಸುತ್ತಮುತ್ತಲಿನಲ್ಲಿ ಕೊಳಚೆ ನೀರು ನಿಂತು ಡೆಂಗ್ಯೂ ರೋಗಕ್ಕೆ ಆಹ್ವಾನ ನೀಡುವಂತಾಗಿದ್ದು ಸ್ವಚ್ಚತೆ ಎನ್ನುವುದು ಮರೀಚಿಕೆಯಾಗಿದೆ. ಹಾಗೆಯೇ ಕಟ್ಟಡದಲ್ಲಿ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ವಿವಿಧ ಕೆಲಸಗಳ ನಿಮಿತ್ತ ನಾಡಕಚೇರಿಗೆ ಆಗಮಿಸುವ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಶೌಚಾಲಯದ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.

ಈ ಕಟ್ಟಡದ ಸಮೀಪದಲ್ಲೇ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯವಿದ್ದು ವಿದ್ಯಾರ್ಥಿನಿಯರ ಭದ್ರತೆಗೂ ಲೋಪ ಉಂಟಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.

ಒಟ್ಟಾರೆಯಾಗಿ ನಾಡ ಕಛೇರಿ ಸ್ಥಳಾಂತರ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತಿದ್ದು ಪ್ರತಿನಿತ್ಯ ವಿವಿಧ ಕಾರ್ಯ ನಿಮಿತ್ತ ನಾಡಕಚೇರಿಗೆ ಆಗಮಿಸುವ ನಾಗರಿಕರು ಹಿಡಿಶಾಪ ಹಾಕುತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಒತ್ತಾಯಿಸಿದ್ದಾರೆ.

Leave a Comment

error: Content is protected !!