ರಿಪ್ಪನ್‌ಪೇಟೆ ಗ್ರಾಮ ಸಭೆಯಲ್ಲಿ ಮಾರ್ದನಿಸಿದ ಹತ್ತು ಹಲವು ಮೂಲಭೂತ ಸೌಲಭ್ಯಗಳ ಕೊರತೆ, ಸಾರ್ವಜನಿಕರ ಆಕ್ರೋಶ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಇಲ್ಲಿನ ಬಸ್ ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿರುವ 32 ಗುಂಟೆ ಜಾಗವನ್ನು ಕೂಡಲೇ ತೆರವುಗೊಳಿಸಿ ಬಸ್ ನಿಲ್ದಾಣವನ್ನು ನಿರ್ಮಿಸುವಂತೆ ಮತ್ತು ವಿನಾಯಕ ವೃತ್ತದಲ್ಲಿನ ಆಟೋ ನಿಲುಗಡೆಗೆ ಶಾಶ್ವತ ಜಾಗ ನೀಡುವುದು ಸೇರಿದಂತೆ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ವಿವಿಧ ಬಡಾವಣೆಯ ಸಂಪರ್ಕ ರಸ್ತೆ ಮತ್ತು ಗ್ರಾಮಾಂತರ ಪ್ರದೇಶಗಳ ಮಣ್ಣಿನ ರಸ್ತೆಗಳು ಮಳೆ ನೀರಿನಿಂದ ಕೊಚ್ಚಿ ಹೋಗುವ ಮೂಲಕ ಕೆಸರು ಗದ್ದೆಯಂತಾಗಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ವೃದ್ಧರು, ಅನಾರೋಗ್ಯ ಪೀಡಿತರು ನಿತ್ಯ ಗೃಹಪಯೋಗಿ ವಸ್ತುಗಳ ಖರೀದಿಗೆ ಬಂದು ಹೋಗದಂತಂಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸಭೆಯಲ್ಲಿ ಸಾರ್ವಜನಿಕರು ಪ್ರಸ್ತಾಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಇಲ್ಲಿನ ಸಾಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ವಿನಾಯಕ ವೃತ್ತದಿಂದ ಕಾಲೇಜ್‌ವರೆಗಿನ ರಸ್ತೆಗೆ ಡಬಲ್ ರೋಡ್ ನಿರ್ಮಾಣಕ್ಕೆ ಸರ್ಕಾರ 5.13.ಕೋಟಿ ರೂ. ವೆಚ್ಚದಲ್ಲಿ ಡಿವೈಡರ್ ಮತ್ತು ಬಾಕ್ಸ್ ಚರಂಡಿ ಮತ್ತು ಡಾಂಬರೀಕರಣ ರಸ್ತೆ ವಿದ್ಯುತ್ ಲೈನ್ ಸ್ಥಳಾಂತರಕ್ಕಾಗಿ ಅನುದಾನವನ್ನು ನೀಡುವ ಮೂಲಕ ಕಾಮಗಾರಿ ಆರಂಭವಾಗಿದ್ದು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಅಂಗಡಿ ಮಳಿಗೆಯ ಜಾಗವನ್ನು ತೆರವುಗೊಳಿಸದೆ ಇರುವುದರಿಂದಾಗಿ ಅಭಿವೃದ್ದಿ ಕಾಮಗಾರಿಗೆ ಹಿನ್ನಡೆಯಾಗಿದೆ. ತಕ್ಷಣ ಅಂಗಡಿಯನ್ನು ತೆರವುಗೊಳಿಸಿ ಅಭಿವೃದ್ದಿ ಕಾಮಗಾರಿಗೆ ಅನುಕೂಲ ಮಾಡಿಕೊಡುವಂತೆ ಗ್ರಾಮಸಭೆಯಲ್ಲಿ ಒಕ್ಕೊರಲ ನಿರ್ಧಾರವನ್ನು ಪ್ರಕಟಿಸಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳು ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ವೈದ್ಯಾಧಿಕಾರಿಗಳು, ಈ ಆಸ್ಪತ್ರೆ ವ್ಯಾಪ್ತಿಗೆ ಸುಮಾರು 75 ಕ್ಕೂ ಹೆಚ್ಚಿನ ಮಜರೆ ಮತ್ತು ಗ್ರಾಮಗಳು ಒಳಪಡುತ್ತಿದ್ದು ನಿತ್ಯ ನೂರಾರು ಜನ ರೋಗಿಗಳು ಬಂದು ಚಿಕಿತ್ಸಾ ಸೌಲಭ್ಯವನ್ನು ಪಡೆಯುತ್ತಿದ್ದು ಸಣ್ಣ-ಪುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿತರಿಸುವಂತೆ ನಮ್ಮ ಆರೋಗ್ಯ ಕೇಂದ್ರಕ್ಕೂ ಅದೇ ಮಾನದಂಡದಲ್ಲಿ ಔಷಧಿ ಮಾತ್ರೆಗಳನ್ನು ಸರಬರಾಜು ಮಾಡಲಾಗುತ್ತಿದ್ದು ಇದರಿಂದ ನಮಗೆ ತೀವ್ರ ಸಮಸ್ಯೆಯಾಗುವಂತಾಗಿ ನಾವು ಖಾಸಗಿ ಮೆಡಿಕಲ್‌ಗಳಿಗೆ ಚೀಟಿ ಬರೆಯಬೇಕಾದ ಅನಿರ್ವಾಯತೆ ಎದುರಾಗಿದೆ ಎಂದು ತಮ್ಮ ಅಸಹಾಕತೆಯನ್ನು ವ್ಯಕ್ತಪಡಿಸಿದರು.

ಅಲ್ಲದೆ ಸಾರ್ವಜನಿಕರಿಗೆ ಹತ್ತಿರದಲ್ಲಿ ಸಿಗಬೇಕಾದಂತಹ ಹೋಬಳಿ ನಾಡಕಛೇರಿ ಕಟ್ಟಡ ಸ್ಥಳಾಂತರಗೊಂಡ ಪರಿಣಾಮದಿಂದಾಗಿ ರೈತ ನಾಗರೀಕರು ದೂರದಿಂದ ಬಂದು ಕಛೇರಿ ಹುಡುಕುವಂತಾಗಿದೆ. ತಕ್ಷಣ ಸ್ಥಳಾಂತರಗೊಂಡ ನಾಡಕಛೇರಿಯನ್ನು ಮುಖ್ಯ ರಸ್ತೆಗೆ ತರುವ ಮೂಲಕ ರೈತ ನಾಗರೀಕರಿಗೆ ಅನುಕೂಲ ಮಾಡಿಕೊಡುವಂತೆ ಸಹ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಚೌಡೇಶ್ವರಿ ದೇವಸ್ಥಾನ ಮತ್ತು ಎಸ್.ಸಿ ಕಾಲೋನಿ ಹಾಗೂ ಇನ್ನಿತರ ಕಡೆಗಳಲ್ಲಿ ಮಳೆ ನೀರು ನುಗ್ಗಿ ಸಾಕಷ್ಟು ರಸ್ತೆಗಳಲ್ಲಿ ಓಡಾಡದಂತಹ ಸ್ಥಿತಿಯಲ್ಲಿದೆ. ತಾವು ಬೇಗ ದುರಸ್ಥಿಗೊಳಿಸುವಂತೆ ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಮಂಜುನಾಥ ಆಚಾರ್ ಗಮನ ಸೆಳೆದರು. ಹಲವು ಬಡಾವಣೆಯಲ್ಲಿ ಸ್ವಚ್ಚತೆ ಇಲ್ಲದೆ ಕಲುಷಿತ ನೀರು ಶೇಖರಣೆಗೊಂಡು ಡೇಂಗ್ಯೂ ಮಾರಕ ರೋಗಕ್ಕೆ ಎರಡು ಬಲಿಯಾಗಿದ್ದು ಅಲ್ಲದೆ ಗ್ರಾಮದಲ್ಲಿ ಸಾಕಷ್ಟು ಸ್ವಚ್ಚತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಉತ್ತರಿಸಿ ಈಗಾಗಲೇ ಹೋಟೆಲ್ ಬೇಕರಿ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ತೀವ್ರ ಮಳೆಯಿಂದಾಗಿ ರಸ್ತೆಗಳು ಹೊಂಡ ಗುಂಡಿ ಬಿದ್ದು ವಾಹನ ಸವಾರರು ಓಡಾದಂತಹ ಸ್ಥಿತಿಯಲ್ಲಿದ್ದು ಸರ್ಕಾರಕ್ಕೆ ಮಳೆ ಹಾನಿಯ ವರದಿಯನ್ನು ನೀಡಲಾಗಿದೆ ಎಂದು ವಿವರಿಸಿದರು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ವಹಿಸಿದ್ದರು. ನೋಡಲ್ ಅಧಿಕಾರಿ ಪಶುವೈದ್ಯಾಧಿಕಾರಿ ಡಾ.ದಯಾನಂದ್, ಪಿಡಿಓ ಮಧುಸೂದನ್ ಹಾಗೂ ಗ್ರಾಮ ಪಂಚಾಯ್ತಬ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪಿಎಸ್‌ಐ ಎಸ್.ಪಿ.ಪ್ರವೀಣ್ ಗ್ರಾಮ ಪಂಚಾಯಿತ್ ಸದಸ್ಯರು ಸಿಬ್ಬಂದಿ ವರ್ಗ ಅಂಗನವಾಡಿ, ಆಶಾ ಕಾರ್ಯಕರ್ತೆರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Comment

error: Content is protected !!