RIPPONPETE | ಅರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ, ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಸಾಗರ-ತೀರ್ಥಹಳ್ಳಿ ಮಾರ್ಗದ ತಲಾ ಒಂದು ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿ ವರ್ಷಗಳಾಗುತ್ತಾ ಬಂದರೂ ಕೂಡಾ ಕಾಮಗಾರಿ ಅರ್ಧಕ್ಕೆ ನಿಂತು ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿಯಂತಾಗಿದೆ.

ಕಳೆದ 2022 ನವೆಂಬರ್, ಡಿಸೆಂಬರ್ ತಿಂಗಳಲ್ಲಿ ರಸ್ತೆ ಸಾಗರ ಎಪಿಎಂಸಿ ಯಾರ್ಡ್ ಬಳಿಯಿಂದ ಸುಮಾರು 1 ಕಿ.ಮೀ. ದೂರದ ರಸ್ತೆ ಅಗಲೀಕರಣ ಮತ್ತು ಬಾಕ್ಸ್ ಚರಂಡಿ, ವಿದ್ಯುತ್ತ ಕಂಬ ಸ್ಥಳಾಂತರ ಹೀಗೆ ಅಭಿವೃದ್ದಿ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಆರ್ಧ ಬರ್ಧವಾಗಿಯೇ ಕುಂಟುತ್ತಾ ಸಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ತಂದೊಡ್ಡಿದೆ.

ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು ಸಾರ್ವಜನಿಕರಿಗಾಗಿ ಸರಬರಾಜು ಮಾಡಲಾಗಿರುವ ಕುಡಿಯುವ ನೀರಿನ ಪೈಪ್‌ಲೈನ್ ಪೈಪ್‌ಗಳು ಒಡೆದು ಕುಡಿಯುವ ನೀರು ಸರಬರಾಜು ಆಗದೇ ಎಲ್ಲಾ ಭೂಮಿ ಪಾಲು ಆಗುವಂತಾಗಿದೆ. ಗ್ರಾಮಾಡಳಿತದವರು ಬರಿ ಪೈಪ್‌ಲೈನ್ ಕಾಮಗಾರಿ ದುರಸ್ಥಿಗಾಗಿ ಲಕ್ಷಾಂತರ ರೂಪಾಯಿ ಹಣ ವಿನಿಯೋಗವಾಗುವಂತಾಗಿದ್ದರೂ ಕೂಡಾ ಒಡೆದ ಹಳೆಯ ಸರಬರಾಜು ಪೈಪ್ ಲೈನ್ ದುರಸ್ಥಿಯಾಗದೆ ಸಾಗರ ರಸ್ತೆಯ ನಿವಾಸಿಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಾಗರ ರಸ್ತೆಯ ಗಣೇಶ ಮೆಟಲ್ ಸ್ಟೋರ‍್ಸ್ ಅಂಗಡಿ ಮುಂಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗವನ್ನು ಬಿಡದೆ ಇರುವುದು ಕಾಮಗಾರಿ ವಿಳಂಬಕ್ಕೆ ಕಾರಣವೆಂದು ಲೋಕೋಪಯೋಗಿ ಇಲಖೆ ಮತ್ತು ಗ್ರಾಮಾಡಳಿತ ತೆರವು ಕಾರ್ಯಾಚರಣೆಗಾಗಿ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಈ ಜಾಗದ ಮೇಲೆ ನ್ಯಾಯಾಲಯದ ತಡೆ ಆದೇಶವಿದೆ ಎಂದು ಹೇಳಿ ಸಾಗಹಾಕುತ್ತಿದ್ದು ಅಭಿವೃದ್ದಿ ಕಾರ್ಯಕ್ಕೆ ಅಡೆ ತಡೆ ಉಂಟು ಮಾಡುತ್ತಿದ್ದು ಅಲ್ಲದೆ ರಸ್ತೆಯ ಮೇಲೆಯೇ 11 ಕೆ.ವಿ. ಹೆವಿಲೈನ್ ವಿದ್ಯುತ್ ಕಂಬ ಇದ್ದು ಕಂಬ ಸ್ಥಳಾಂತರ ಮಾಡಲು ಈ ಅಂಗಡಿ ಮಾಲೀಕ ನಿರ್ಲಕ್ಷ್ಯ ಧೋರಣೆ ತಾಳಿರುವುದೇ ಇಲ್ಲಿನ ರಸ್ತೆ ಅಗಲೀಕರಣದ ಕಾಮಗಾರಿಗೆ ನೂರೆಂಟು ವಿಘ್ನಗಳಾಗಲು ಕಾರಣವಾಗಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಾಗರ ರಸ್ತೆಯ ಗ್ರಾಮ ಪಂಚಾಯತ್ ಹಿಂಭಾಗದಲ್ಲಿನ 8 ಅಡಿ ಅಗಲ 155 ಅಡಿ ಉದ್ದ ಕನ್ಸರ್‌ವೆನ್ಸಿ ರಸ್ತೆಯಿದ್ದು ಈ ರಸ್ತೆಯ ಮಧ್ಯದಲ್ಲಿಯೇ 11 ಕೆ.ವಿ.ಲೈನ್ ಕಂಬವನ್ನು ಅಳವಡಿಸಿದ್ದಾರೆಂದು ಸಂಪರ್ಕ ರಸ್ತೆಯ ನಿವಾಸಿಗಳು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಮನವಿ ಮೂಲಕ ತೆರವುಗೊಳಿಸಿ ನಮಗೆ ಓಡಾಡಲು ರಸ್ತೆಯಲ್ಲಿನ ಕಂಬ ತೆರವುಗೊಳಿಸುವಂತೆ ಆಗ್ರಹಿಸಿದ್ದು ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ಈ ಸಂಪರ್ಕ ರಸ್ತೆಯಲ್ಲಿ ಅಳವಡಿಸಲಾದ ಕಂಬವನ್ನು ತೆರವುಗೊಳಿಸುವಂತೆ ಸೂಚಿಸಿದರು. ನಂತರದಲ್ಲಿ ಕಂಬವನ್ನು ತೆಗೆಯದೇ ಕಾಮಗಾರಿ ಅರ್ಧದಲ್ಲಿಯೇ ಉಳಿಯುವಂತಾಗಿದೆ. ಅಲ್ಲದೆ ಅಂಗಡಿ ಮಾಲೀಕನನ್ನು ಕರೆದು ಸಾರ್ವಜನಿಕರ ಸಮ್ಮುಖದಲ್ಲಿ ಕಟ್ಟಡ ತೆರವುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಸಹ ಸೂಚಿಸಿದರೂ ಕೂಡಾ ಶಾಸಕರ ಮಾತಿಗೂ ಕ್ಯಾರೆ ಎನ್ನದೇ ಹಠಸಾಧನೆಗೆ ಮುಂದಾಗಿದ್ದು ಇದರಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದ್ದಾರೆ.

ಈಗಾಗಲೇ ಶಾಲೆ ಕಾಲೇಜ್ ಮತ್ತು ಮಳೆಗಾಲ ಆರಂಭವಾಗಿದ್ದು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಶಾಲಾ ಮಕ್ಕಳು ರಸ್ತೆಯ ಅಂಚಿನಲ್ಲಿ ನಡೆದು ಕೊಂಡು ಹೋಗಿ ಬರುವುದೇ ಕಷ್ಟಕರವಾಗಿದೆ ಅಗಲೀಕರಣ ಕಾಮಗಾರಿಗಾಗಿ ತೆಗೆಯಲಾದ ಹೊಂಡ ಗುಂಡಿ ಮತ್ತು ರಸ್ತೆಯ ಮೇಲೆ ಹಾಕಲಾದ ಮಣ್ಣಿನಿಂದಾಗಿ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ ವಿದ್ಯಾರ್ಥಿಗಳು ಹಾಕಿಕೊಂಡ ಬಂದಂತಹ ಶಾಲಾ ಸಮವಸ್ತ್ರಗಳ ಮೇಲೆ ಕೆಸರು ಸಿಡಿದು ಮಾರನೆ ದಿನ ಸಮವಸ್ತ್ರ ಹಾಕಿಕೊಂಡು ಬರುವುದು ಹೇಗೆ ಎಂಬ ಚಿಂತೆ ಕಾಡುವಂತಾಗಿದೆ.

ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳು ಮತ್ತು ಸ್ಥಳೀಯ ಗ್ರಾಮಾಡಳಿತ ಹಾಗೂ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಇತ್ತ ಗಮನಹರಿಸಿ ತುರ್ತು ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರಿಗಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವತ್ತ ಮುಂದಾಗುವರೆ ಕಾದು ನೋಡಬೇಕಾಗಿದೆ.

Leave a Comment

error: Content is protected !!