ಅಂಚೆ ವಿಮೆ ದೇಶದ ಬಡಜನರಿಗೆ ವರದಾನ ; ಅಧೀಕ್ಷಕ ಜಯರಾಮ ಶೆಟ್ಟಿ

Written by Malnadtimes.in

Updated on:

WhatsApp Group Join Now
Telegram Group Join Now

HOSANAGARA | ಭಾರತ ಸರ್ಕಾರವು ಅಂಚೆ ಇಲಾಖೆ ಮೂಲಕ ದೇಶದ ಗ್ರಾಮೀಣ ಭಾಗದ ಜನರಿಗೆ ಜೀವವಿಮಾ ಪಾಲಿಸಿ ಸೌಲಭ್ಯ ಕಲ್ಪಿಸುವ ಸದ್ದುದೇಶದಿಂದ ಡಿಜಿಟಲ್ ಪಾವತಿ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಇದಕ್ಕಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಎಂಬ ಸಂಸ್ಥೆಯನ್ನು ಆರಂಭಿಸಿದೆ ಎಂದು ಅಂಚೆ ಇಲಾಖೆಯ ಜಿಲ್ಲಾ ಅಧೀಕ್ಷಕ ಜಯರಾಮ ಶೆಟ್ಟಿ ತಿಳಿಸಿದರು.

ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನ ‘ಒಂದು ಸೂರು- ಸೇವೆ ನೂರು’ ಮತ್ತು ಅಪಘಾತ ವಿಮೆಯ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಂಚೆ ಇಲಾಖೆಯು ವಿವಿಧ ಖಾಸಗಿ ಇನ್ಸೂರೆನ್ಸ್ ಕಂಪನಿಗಳ ಸಹಭಾಗಿತ್ವದಲ್ಲಿ ದೇಶದ ಪ್ರತಿ ಹಳ್ಳಿಯ ಜನರ ಜೀವವಿಮೆಗೆ ಹೊಸ ಮುನ್ನುಡಿ ಬರೆದಿದೆ. ಇಲಾಖೆಯು ಅತಿ ಕಡಿಮೆ ಖರ್ಚಿನಲ್ಲಿ ಪಾಲಿಸಿದಾರರ ಕುಟುಂಬಕ್ಕೆ ಸಾಮಾಜಿಕ ಭದ್ರತೆ ಒದಗಿಸುತ್ತಿದೆ. ಪ್ರತಿ ಪಾಲಿಸಿಯ ಮೊತ್ತ ವಾರ್ಷಿಕ ಕೇವಲ 520 ಹಾಗೂ 750 ರೂ. ಆಗಿದ್ದು ಜೀವಹಾನಿ ಸಂಭವಿಸಿದ್ದಲ್ಲಿ, ಮೃತರ ಕುಟುಂಬಕ್ಕೆ ಕ್ರಮವಾಗಿ 10 ಲಕ್ಷ ಹಾಗೂ 15 ಲಕ್ಷ ರೂ. ಮೊತ್ತದ ಪರಿಹಾರದ ಹಣ ದೊರೆಯಲಿದೆ. ಇದು ನೊಂದ ಕುಟುಂಬದ ಭವಿಷ್ಯಕ್ಕೆ ಬೆಳಕಾಗಲಿದೆ. ವಿಮಾದಾರ ಒಳರೋಗಿ ಆದಲ್ಲಿ ಪಾಲಿಸಿಗೆ ಅನುಗುಣವಾಗಿ ದಿನವೊಂದಕ್ಕೆ 1 ಸಾವಿರದಂತೆ 10 ಸಾವಿರ ರೂ.ವರೆಗೆ ಇತರೆ ಖರ್ಚು ಅಥವಾ ಕೆಲವು ಪಾಲಿಸಿಗಳಲ್ಲಿ ಒಂದು ಲಕ್ಷ ರೂ.ವರೆಗೂ ವೈದ್ಯಕೀಯ ಚಿಕಿತ್ಸಾ ಶುಲ್ಕದ ವೆಚ್ಚವನ್ನು ಸಂಸ್ಥೆ ಭರಿಸುತ್ತದೆ. ಮೃತಪಟ್ಟ ಪಾಲಿಸಿದಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ವಿದ್ಯಾರ್ಥಿ ವೇತನ ಸಹ ನೀಡುತ್ತದೆ. ಸಾರ್ವಜನಿಕರು ಅಂಚೆ ಇಲಾಖೆಯ ವಿವಿಧ ಜನಪರ ಯೋಜನೆಗಳ ಉಪಯೋಗಕ್ಕೆ ಕೈ ಜೋಡಿಸುವಂತೆ ಅವರು ಕರೆ ನೀಡಿದರು.

ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನ ‘ಒಂದು ಸೂರು- ಸೇವೆ ನೂರು’ ಕಾರ್ಯಕ್ರಮವನ್ನು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಅಪಘಾತ ವಿಮೆಯ ಪರಿಹಾರ 10 ಲಕ್ಷ ರೂ. ಮೊತ್ತದ ಚೆಕ್ ಅನ್ನು ಫಲಾನುಭವಿ ನಾಗರತ್ನ ಕೋಂ ಕುಮಾರಸ್ವಾಮಿ ಅವರಿಗೆ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಮಾತನಾಡಿ, ಬಡ ಕೂಲಿ ಕಾರ್ಮಿಕವರ್ಗಕ್ಕೆ ಈ ಯೋಜನೆ ಅತ್ಯಂತ ಸಹಕಾರಿ ಆಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಐಪಿಪಿಬಿ ಜಿಲ್ಲಾ ಹಿರಿಯ ವ್ಯವಸ್ಥಾಪಕ ಕೆ.ಪಿ. ಜಿತೇಶ್ ಸದಾಶಿವನ್, ಸಹಾಯಕ ವ್ಯವಸ್ಥಾಪಕ ಎಸ್.ಟಿ. ಮಂಜುನಾಥ್, ಪಿಡಿಓ ಪವನ್ ಕುಮಾರ್, ಸಾಗರ ವಿಭಾಗದ ಅಂಚೆ ನಿರೀಕ್ಷಕ ಧನಂಜಯಗೌಡ ಉಪಸ್ಥಿತರಿದ್ದರು.

ಕು. ಸೃಷ್ಠಿ ಪ್ರಾರ್ಥಿಸಿ, ಗ್ರಾ.ಪಂ. ಲೆಕ್ಕ ಸಹಾಯಕಿ ಶಮೀರಾ ಬಾನು ಸ್ವಾಗತಿಸಿದರು. ಹೊಸನಗರ ಶಾಖೆ ಅಂಚೆ ಪಾಲಕ ಎಸ್. ಎಂ. ಪ್ರಕಾಶ್ ನಿರೂಪಿಸಿ, ಇಲಾಖೆ ಸಿಬ್ಬಂದಿ ವಡ್ಡಿನಬೈಲು ವೆಂಕಟೇಶ್ ವಂದಿಸಿದರು.

Leave a Comment

error: Content is protected !!