HOSANAGARA | ಸಂಜೆ 06 ಗಂಟೆ ನಂತರ ಶಾಲೆ ಆವರಣ ಪ್ರವೇಶ ಮಾಡಿದರೆ ಕಠಿಣ ಕ್ರಮ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಸಂಜೆ ಆರು ಗಂಟೆಯ ನಂತರ ಶಾಲೆ ಆವರಣ ಪ್ರವೇಶಿಸುವುದು ಮತ್ತು ಹುಟ್ಟುಹಬ್ಬ ಆಚರಣೆ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ತಿಳಿಸಿದ್ದಾರೆ.

ಶನಿವಾರ ಸಂಜೆಯ ನಂತರ ಸರ್ಕಾರಿ ಶಾಲೆಯ ಆವರಣಗಳ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಕೆಲವೆಡೆ ಸರ್ಕಾರಿ ಶಾಲೆಗಳ ಆವರಣದಲ್ಲಿ ಯುವಕರು ಮತ್ತು ಸಾರ್ವಜನಿಕರು ಸಂಜೆ 6 ಗಂಟೆಯ ನಂತರ ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು ಸಂಜೆ 6 ಗಂಟೆಯ ನಂತರ ಶಾಲಾ ಆವರಣದಲ್ಲಿ ಯಾವುದೇ ಸಾರ್ವಜನಿಕರು ಸಂಬಂಧಪಟ್ಟವರ ಅನುಮತಿ ಇಲ್ಲದೆ ಶಾಲೆಯ ಆವರಣದಲ್ಲಿ ವಿನಾಃ ಕಾರಣ ಪ್ರವೇಶ ಮಾಡುವಂತಿಲ್ಲ.

ಶಾಲಾ ಆವರಣದಲ್ಲಿ ಸಾರ್ವಜನಿಕರು ಅಥವಾ ಯುವಕರು ಹುಟ್ಟುಹಬ್ಬ ಆಚರಣೆ ಇತ್ಯಾದಿ ಮಾಡುವಂತಿಲ್ಲ. ಸಂಜೆಯ ವೇಳೆಯಲ್ಲಿ ಶಾಲಾ ಆವರಣದಲ್ಲಿ ಹಾಗೂ ಶಾಲೆಯ 100 ಮೀಟರ್ ಒಳಗಡೆ ಕುಳಿತುಕೊಳ್ಳುವುದು, ಮದ್ಯಪಾನ, ಧೂಮಪಾನ ಮಾಡುವುದು ಹಾಗೂ ಶಾಲೆಯ ಆವರಣದಿಂದ 100 ಮೀಟರ್ ಒಳಗೆ ತಂಬಾಕು ಇತ್ಯಾದಿ ಮಾದಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಅಂತಹ ಪ್ರಕರಣ ಕಂಡು ಬಂದರೆ ಆ ಅಂಗಡಿಯ ವಿರುದ್ಧ ಕೇಸ್ ದಾಖಲಿಸಲಾಗುವುದು.

ಒಂದು ವೇಳೆ ಸಾರ್ವಜನಿಕರು ಮೇಲ್ಕಂಡ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Comment

error: Content is protected !!