Hosanagara | ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಹರಾಜು ಅವೈಜ್ಞಾನಿಕ, ಆರೋಪ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಖಾಸಗಿ ಬಸ್ ನಿಲ್ದಾಣದಲ್ಲಿರುವ ಪಟ್ಟಣ ಪಂಚಾಯತಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ಹರಾಜು ಅವೈಜ್ಞಾನಿಕವಾಗಿದ್ದು, ಇದರಲ್ಲಿ ಅಧಿಕಾರಿಗಳಿಗೆ ಅನುಕೂಲಕರ ವಾತಾವರಣ ಹೆಚ್ಚಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನಿ ಕುಮಾರ್ ಗಂಭೀರವಾಗಿ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರ ಬಸ್ ನಿಲ್ದಾಣದಲ್ಲಿ ಪಟ್ಟಣ ಪಂಚಾಯತಿಗೆ ಸಂಬಂದಿಸಿದ ಸಿ.ಎಂ.ಎಸ್.ಎಂ.ಟಿ.ಡಿ.ಪಿ ಯೋಜನೆಯಡಿ ನಿರ್ಮಿಸಲಾಗಿರುವ ಒಟ್ಟು 14 ವಾಣಿಜ್ಯ ಮಳಿಗೆಗಳು 2012 ರಲ್ಲಿ ಮಾಸಿಕ ಬಾಡಿಗೆ ನಿಗದಿಪಡಿಸಿ ಹರಾಜು ಮಾಡಲಾಗಿದ್ದು, ಈ ಹರಾಜಿನಿಂದ ಸರ್ಕಾರಕ್ಕೆ ಆದಾಯವಾಗುವುದಕ್ಕಿಂತ ತಳಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳಿಗೆ ಆದಾಯವಾಗುವಂತಹಾ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರ ನಿಗದಿಪಡಿಸಿದ ದರದ ಬದಲು ಅಂದಿನ ಅಧಿಕಾರಿಗಳು ಮತ್ತು ಅಂದಿನ ಸದಸ್ಯರು ನಿಗದಿಪಡಿಸಿದ ದುಪ್ಪಟ್ಟು ದರದ ಆಧಾರದ ಮೇಲೆ ಹರಾಜು ಪ್ರಕ್ರಿಯೆ ನಡೆದಿದ್ದು, ಇಂದಿನವರೆಗೂ ಅದೇ ದರ ಮುಂದುವರಿದಿದೆ. ಹರಾಜಿನಲ್ಲಿ ಮಳಿಗೆ ಹಿಡಿಯಲೆತ್ನಿಸುವ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ನಿಗದಿಪಡಿಸಿದ ದರದಿಂದ ಮಳಿಗೆಗಳ ಹರಾಜಿನಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ , ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸಂಬಂದಿಸಿದಂತೆ ವಾಣಿಜ್ಯ ಮಳಿಗೆಗಳು ನೆಲ ಮಹಡಿ, ಮೇಲ್ಮಹಡಿ ಎಂಬಂತೆ ಕಟ್ಟಡಗಳನ್ನು ವಿಂಗಡಿಸಿಲಾಗುತ್ತದೆ. ಲೋಕಾರೂಡಿಯಂತೆ ಚದರ ಅಡಿ ಲೆಕ್ಕದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಆದರಲ್ಲಿ ನೆಲ ಮಹಡಿಗೆ ಪ್ರತೀ ಚದರ ಮೀಟರ್‌ಗೆ 18183 ರೂ. ನಂತೆ ದರ ನಿಗದಿಪಡಿಸಿ ಹರಾಜು ನಡೆಸಲಾಗಿದೆ. ಇದು ಮಳಿಗೆಗಳನ್ನು ಹರಾಜು ಪಡೆದ ವ್ಯಾಪಾರಸ್ಥರಿಗೆ ಹೆಚ್ಚಿನ ಹೊರೆಯಾಗಿದೆಯಲ್ಲದೇ ಇಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವುದು ಕಂಡುಬರುತ್ತದೆಯಲ್ಲದೇ ಇಲ್ಲಿ ಒಂದು ಮಳಿಗೆಯಲ್ಲಿ ಎರಡು ಬಗೆಯ ವ್ಯಾಪಾರ ನಡೆಯುತಿದ್ದು, ಮಾಲಿಕತ್ವವು ಬೇರೆ ಬೇರೆಯಾಗಿರುತ್ತದೆ. ಮಳಗಿಗಳ ವಿಸ್ತೀರ್ಣವು ಕೂಡ ವ್ಯತ್ಯಾಸವಾಗಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಬದಲಾವಣೆಯಾಗಲಿಲ್ಲ. ಇಲ್ಲಿ ಮೀಸಲಾತಿಗೊಳಪಟ್ಟಂತೆ ಹರಾಜು ಪ್ರಕ್ರಿಯೆ ನಡೆಯಬೇಕಾಗಿತ್ತು ಆದರೆ ಏಕಪಕ್ಷೀಯವಾಗಿ ಹರಾಜು ನೀಡಲಾಗಿದೆ. ಪ್ರತೀ ವರ್ಷ ಶೇ. 10 ದರ ಹೆಚ್ಚು ಮಾಡಬೇಕಾಗಿತ್ತು ಅದರ ಬದಲು ಮನಸೋ ಇಚ್ಚೆ ದರ ಹೆಚ್ಚಿಸಲಾಗುತ್ತಿದೆ. ತಾಲ್ಲೂಕಿನ ಹಾಲೀ ಶಾಸಕರ ಗಮನಕ್ಕೆ ತಂದು ಈ ಬಗ್ಗೆ ಅಧಿಕಾರಿಗಳಿಗೆ ಪುನರ್ ಪರಿಶೀಲಿಸಿ ಸರ್ಕಾರದ ನಿಯಮದಂತೆ ದರ ನಿಗದಿಪಡಿಸುವಂತೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರ ಸಲಹೆ ನೀಡಿದರೂ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಈಗಾಗಲೇ ಎರಡು ಜಿಲ್ಲಾಧಿಕಾರಿ, ಮೂರು ಪಿ.ಡಿ. ಗಳು ಬದಲಾವಣೆಯಾಗಿದ್ದಾರೆ. ಇನ್ನಾದರೂ ತಳಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಎಚ್ಚೆತ್ತು ಮುಂದಿನ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದಸ್ಯರಾದ, ಗುರುರಾಜ್, ನಿತ್ಯಾನಂದ, ನೇತ್ರಾ ಇದ್ದರು.

Leave a Comment

error: Content is protected !!