Hosanagara | ಐತಿಹಾಸಿಕ ಪುರಾತನ ಕಳೂರು ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಅಝಾ(ಬಕ್ರೀದ್)ನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬಕ್ರೀದ್ ಪ್ರಯುಕ್ತ ವಿಶೇಷ ಖುತ್ಬಾನ್ನು ನಿರ್ವಹಿಸಿ ಮಾತನಾಡಿದ ಮಸೀದಿಯ ಖತೀಬರಾದ ಜನಾಬ್ ಮುಫ್ತಿ ಮೊಹಮ್ಮದ್ ಇಮ್ತಿಯಾಝ್, ಈದ್ ಉಲ್ ಅಝಾ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನ ನೆನಪಿನಲ್ಲಿ ಆಚರಿಸಲಾಗುತ್ತಿದ್ದು, ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ (ಸ.ಅ) ಅವರಿಗಿಂತ ಸುಮಾರು 2500 ಸಾವಿರ ವರ್ಷ ಹಿಂದೆ ಜನಿಸಿದ ಪ್ರವಾದಿಯಾಗಿದ್ದು. ಪವಿತ್ರ ಖುರಾನ್ ನಲ್ಲಿ ಹೇಳಿರುವಂತೆ ಪ್ರವಾದಿ ಇಬ್ರಾಹಿಂ ದಂಪತಿಗಳಿಗೆ ತಮ್ಮ ಇಳಿ ವಯಸ್ಸಿನಲ್ಲಿ ಒಬ್ಬ ಮಗ ಜನಿಸುತ್ತಾನೆ. ಆದರೆ ಅಲ್ಲಾಹು ಇವರಿಗೆ ಒಂದು ಅಗ್ನಿಪರೀಕ್ಷೆಗೆ ಒಳಪಡಿಸಿದನು, ಒಮ್ಮೆ ಅಲ್ಲಾಹು ಕನಸಿನಲ್ಲಿ ಇಬ್ರಾಹಿಂ ಬಳಿ ಇರುವ ಯಾವುದಾದರೂ ಆತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ರೂಪದಲ್ಲಿ ಅರ್ಪಿಸುವಂತೆ ಆದೇಶಿಸುತ್ತಾನೆ. ಕನಸು ಬಿದ್ದ ಬಳಿಕ ಅನೇಕ ದಿನಗಳ ಕಾಲ ಪ್ರವಾದಿ ಇಬ್ರಾಹಿಂರವರಿಗೆ ಇದು ಭಾದಿಸುತ್ತಿತ್ತು. ಬಳಿಕ ಕನಸಿನ ಕುರಿತು ತನ್ನ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಸಾಕಷ್ಟು ಚರ್ಚೆ ಬಳಿಕ ಇಬ್ರಾಹಿಂ ದಂಪತಿಗಳು ತಮ್ಮ ಒಬ್ಬನೇ ಪ್ರೀತಿಯ ಮಗನನ್ನು ಅಲ್ಲಾಹುವಿಗೆ ಬಲಿ ನೀಡಲು ನಿರ್ಧರಿಸುತ್ತಾರೆ. ಮಗ ಇಸ್ಮಾಯಿಲ್ ಸಹ ಏನನ್ನೂ ಯೋಚಿಸದೇ ಕೂಡಲೇ ಒಪ್ಪಿಗೆ ನೀಡುತ್ತಾನೆ. ಕೊನೆಗೆ ಇಬ್ರಾಹಿಂ ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾನೆ ಈ ವೇಳೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಅಲ್ಲಾಹುವನ್ನು ನೆನೆದು ಭಕ್ತಿಯಿಂದ ಮಗನನ್ನು ತ್ಯಾಗ ಮಾಡಲು ಇಬ್ರಾಹಿಂ ಮುಂದಾಗುತ್ತಾರೆ ಮಗನ ಕುತ್ತಿಗೆಗೆ ಕತ್ತಿಯನ್ನಿಟ್ಟು ಕತ್ತರಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ.
ಇಸ್ಮಾಯಿಲ್ ಬದಲಿಗೆ ಅಲ್ಲಾಹುವಿನ ಕಡೆಯಿಂದ ಒಂದು ಕುರಿ ಅನುಗ್ರಹವಾಗಿ ಬಲಿದಾನವಾಗುತ್ತದೆ ಹೀಗಾಗಿ ಈ ಹಬ್ಬವನ್ನು ತ್ಯಾಗ- ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತದೆ. ಈದ್ ಉಲ್ ಅಝಾ ದಿನದಂದು ಮೇಕೆ, ಕುರಿ ಮತ್ತಿತರ ಪ್ರಾಣಿಗಳನ್ನು ಬಲಿ ನೀಡುತ್ತಾರೆ. ಈ ಹಬ್ಬವು ಮನುಷ್ಯನ ಮನಸ್ಸಿನಲ್ಲಿರುವ ದುರಾಸೆ, ಮೋಸ, ದ್ವೇಷ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದನ್ನು ಸೂಚಿಸುತ್ತದೆ ಎಂದರು.
ಉಪಾಧ್ಯಾಯರಾದ ಜನಾಬ್ ಹಾಫೀಝ್ ಅಬ್ದುಲ್ಲಾ, ಮೌಝನ್ ಅಬುತಾಲಿಬ್, ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಯುವಕರು ಹಾಗೂ ಪುಟಾಣಿ ಮಕ್ಕಳು ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.