ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ಶಿಕ್ಷಣ ಜೀವನದ ಅವಿಭಾಜ್ಯ ಅಂಗ, ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಶಿಕ್ಷಣ ಇಲಾಖೆ ಪ್ರಮುಖ ಆದ್ಯತೆ ನೀಡುತ್ತಿದೆ,ಅಂತೆಯೇ ನಮ್ಮ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮ ವಹಿಸುವ ಅನಿವಾರ್ಯತೆ ಇದೆ ಎಂದು ಮಾರುತಿಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶಂಕರ ಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಕಚ್ಚಿಗೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಹೆಚ್ಚುವರಿ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲೆಯ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೆ ತರುತ್ತಲೇ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಖುದ್ದಾಗಿ ಭೇಟಿ ನೀಡಿದ್ದು, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಅಧಿಕಾರಿಗಳಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಬಗರ್ ಹುಕುಂ ಸಮಿತಿಯ ಮಾಜಿ ಸದಸ್ಯರೂ ಹಾಗೂ ಗ್ರಾ.ಪಂ.ಮಾಜಿ ಸದಸ್ಯ ಮನೋಧರ ಮಾತನಾಡಿ, ಶಾಲೆಗಳು ದೇವಾಲಯಗಳಿದ್ದಂತೆ, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು. ನಮ್ಮ ಅಧಿಕಾರದ ಅವಧಿಯಲ್ಲಿ ಈ ಶಾಲೆಗೆ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಿರುವುದನ್ನೂ ಸ್ಮರಿಸಿದ ಅವರು ಶಾಲೆಗಳು ರಾಜಕೀಯದಿಂದ ದೂರ ಉಳಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ತಾಲ್ಲೂಕು ಕೆಡಿಪಿ ಮಾಜಿ ಸದಸ್ಯ ಶಾಬುದ್ದೀನ್ ಮಾತನಾಡಿ, ಈ ಶಾಲೆಯು ಅನೇಕರ ಬಾಳಿಗೆ ಅಡಿಪಾಯ ನೀಡಿದ್ದು ಶಾಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವ ಅಗತ್ಯತೆ ಇದೆ ಎಂದರು.

ದಾನಿಗಳ ಸಹಕಾರದಿಂದ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಶಾಲಾ ಅಭಿವೃದ್ಧಿ ನಿಧಿಯನ್ನು ಆರಂಭಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಕೆ ಎನ್ ವಹಿಸಿದ್ದರು. ದಾನಿಗಳಾದ ಭೋಜರಾವ್ ಕಚ್ಚಿಗೆಬೈಲು, ತೀರ್ಥೇಶ್ ಮೂಡಗಲ್, ಸಿದ್ದೇಶ್. ಪಿ. ಅತ್ತಿಗಾರು, ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮಸ್ಥರಾದ ಚಂದ್ರಪ್ಪ, ನಾಸಿರ್, ಮುತ್ತುರಾಜ್, ಸಾಧಿಕ್ ಅಲಿ, ಶ್ರೀನಿವಾಸ, ಪೋಷಕರು, ಹಳೆ ವಿದ್ಯಾರ್ಥಿಗಳು ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಸಹ ಶಿಕ್ಷಕರಾದ ಧನಂಜಯ್ ಸ್ವಾಗತಿಸಿದರೆ ಮುಖ್ಯ ಶಿಕ್ಷಕರಾದ ವೆಂಕಟೇಶ್ ವಂದಿಸಿದರು.

Leave a Comment

error: Content is protected !!