ಶಿಥಿಲಗೊಂಡ ರಿಪ್ಪನ್‌ಪೇಟೆ ನಾಡಕಚೇರಿ ಕಟ್ಟಡ, ಕಚೇರಿ ಸ್ಥಳಾಂತರಕ್ಕೆ ಶಾಸಕ ಗೋಪಾಲಕೃಷ್ಣ ಸೂಚನೆ

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಇಲ್ಲಿನ ಹೋಬಳಿ ಕಛೇರಿ ಕಟ್ಟಡ ಶಿಥಿಲಗೊಂಡು ಮೇಲ್ಛಾವಣಿ ಸಂಪೂರ್ಣ ಸೋರುತ್ತಿದ್ದು ಇದರಿಂದ ಗಣಕಯಂತ್ರಗಳು ಮತ್ತು ದಾಖಲೆ ಪತ್ರಗಳು ನೀರು ಬಿದ್ದು ಹಾಳಾಗುವಂತಾಗಿದ್ದು ತಕ್ಷಣವೇ ಬರುವೆ ಗ್ರಾಮದ ದೊಡ್ಡಿನಕೊಪ್ಪದಲ್ಲಿರುವ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸುವಂತೆ ನಾಡಕಛೇರಿಯ ಉಪತಹಶೀಲ್ದಾರ್ ಹುಚ್ಚರಾಯಪ್ಪನವರಿಗೆ ಮತ್ತು ಗ್ರಾಮ ಪಂಚಾಯ್ತಿ ಪಿಡಿಓರಿಗೆ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು (Beluru Gopalakrishna) ಸೂಚಿಸಿದರು.

ಇಂದು ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದಿಢೀರ್ ಹೋಬಳಿ ಕಛೇರಿಗೆ ಭೇಟಿ ನೀಡಿ ಶಿಥಿಲಗೊಂಡ ಕಟ್ಟಡವನ್ನು ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಉಪತಹಶೀಲ್ದಾರ್ ಹುಚ್ಚರಾಯಪ್ಪ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ತುರ್ತು ಕಛೇರಿಯನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಕಟ್ಟಡವಾಗಿದ್ದು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುದಾನವನ್ನು ಬಿಡುಗಡೆಗೊಳಿಸಿ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈಗಾಗಲೇ ಆನಂದಪುರ ರಾಜ್ಯ ಹೆದ್ದಾರಿಯ ರಿಪ್ಪನ್‌ಪೇಟೆ ವಿನಾಯಕ ವೃತ್ತದಿಂದ ಎಪಿಎಂಸಿ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ನಡೆಸಲಾಗುತ್ತಿದ್ದು ಮಳೆಗಾಲ ಆರಂಭವಾದ ಕಾರಣ ಡಾಂಬರೀಕರಣ ಕಾಮಗಾರಿ ಬಿಟ್ಟು ಉಳಿದಂತಹ ಚರಂಡಿಗೆ ಜಲ್ಲಿ ಹಾಕುವ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಖಾಸಗಿ ಅಂಗಡಿ ಮಾಲೀಕನಿಂದಾಗಿ ಕಾಮಗಾರಿಗೆ ಅಡ್ಡಿಯಾಗುತ್ತಿದ್ದು ಪಂಚಾಯತ್ ನಿಂದ ಆತನ ಅಂಗಡಿಯ ವಿಸ್ತೀರ್ಣದ ಮಾಹಿತಿ ಪಡೆದು ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರ ಅಭಿವೃದ್ದಿ ಕಾರ್ಯಕ್ಕೆ ಅಡ್ಡಿಯಾಗಿರುವ ಕಟ್ಟಡವನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಸಾಗರದಿಂದ ಆನಂದಪುರ, ರಿಪ್ಪನ್‌ಪೇಟೆ ಮಾರ್ಗವಾಗಿ ತೀರ್ಥಹಳ್ಳಿ, ಆಗುಂಬೆ, ಹೆಬ್ರಿ, ಮಣಿಪಾಲ, ಧರ್ಮಸ್ಥಳಕ್ಕೆ ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಶೀಘ್ರ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು.
– ಗೋಪಾಲಕೃಷ್ಣ ಬೇಳೂರು, ಶಾಸಕ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡ, ಪಕ್ಷದ ಮುಖಂಡರಾದ ಅಮೀರ್‌ಹಂಜಾ, ಆರ್.ಎನ್.ಮಂಜುನಾಥ, ರವೀಂದ್ರ ಕೆರೆಹಳ್ಳಿ, ಆಸೀಫ್, ಪ್ರಕಾಶ ಪಾಲೇಕರ್, ಮೊಹಿದ್ದೀನ್, ಹಿರಿಯಣ್ಣ ಭಂಡಾರಿ, ವಿಜಯ ಮಾದಾಪುರ, ನವೀನ ಕೆರೆಹಳ್ಳಿ, ಶ್ರೀಧರ ಇನ್ನಿತರರು ಹಾಜರಿದ್ದರು.

Leave a Comment

error: Content is protected !!