ರಸ್ತೆ ಅಗಲೀಕರಣದ ನೆಪ, ಬೇಕಾಬಿಟ್ಟಿ ಕಾಮಗಾರಿ ನಾಗರೀಕರ ಆಕ್ರೋಶ

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ : ರಸ್ತೆ ಅಗಲೀಕರಣಕ್ಕೆ ನಿಗದಿಪಡಿಸಲಾದ ಜಾಗ ತೆರವುಗೊಳಿಸದೆ ಪ್ರಭಾವಿ ವ್ಯಕ್ತಿಗಳು ಇರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಸಾಗರ ರಸ್ತೆಯ ನಿವಾಸಿಗಳು ಮತ್ತು ಸಾರ್ವಜನಿಕರ ಓಡಾಡದಂತಾಗಿ ಎಲ್ಲೆಂದರಲ್ಲಿ ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ರಸ್ತೆ, ಚರಂಡಿ ಪಾಲಾಗುವಂತಾಗಿದೆ.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಶಾಸಕ ಹರತಾಳು ಹಾಲಪ್ಪ ವಿಶೇಷ ಆಸಕ್ತಿ ವಹಿಸಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಸಾಗರ ರಸ್ತೆಯ ಎಪಿಎಂಸಿ ಯಾರ್ಡ್ ವರೆಗೆ ಒಂದು ಕಿ.ಮೀ. ದೂರದ ದ್ವಿಪಥ ರಸ್ತೆ ಅಭಿವೃದ್ದಿಗೆ 4.85 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ ಕೂಡಾ ಕಾಮಗಾರಿ ಆಮೆಗತಿಯಲ್ಲಿ ಸಾಗುವಂತಾಗಿದೆ.

ಸಾಗರ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಸಾಕಷ್ಟು ಅಂಗಡಿ, ವಾಸದ ಮನೆಗಳು ಇದ್ದು ಅವುಗಳನ್ನು ತೆರವುಗೊಳಿಸುತ್ತಾ ಬಾಕ್ಸ್ ಚರಂಡಿ ಮತ್ತು ಡಿವೈಡರ್ ಕಾಮಗಾರಿ ಜೊತೆ ಡಾಂಬರೀಕರಣವನ್ನು ಸಹ ಅಲ್ಪಸ್ವಲ್ಪ ಮಾಡುತ್ತಾ ಬರುತ್ತಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿ ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸಲಾದ ಜಾಗವನ್ನು ತೆರವುಗೊಳಿಸದೇ ಕಾನೂನು ಮೊರೆಹೋಗಿ ಕಾಮಗಾರಿಗೆ ಕಂಟಕವಾಗಿದ್ದಾರೆ.

ಈ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಗಲೀಕರಣದ ರಸ್ತೆಯ ಬಾಕ್ಸ್ ಚರಂಡಿಯ ಹೊರಗೆ ಅಳವಡಿಸಲಾಗಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿಯಲ್ಲಿರುವ ವಿದ್ಯುತ್ ಕಂಬ ಹಾಕಲು ಬಿಡದೇ ಪ್ರತಿಷ್ಟೆ ಮಾಡುತ್ತಿದ್ದು ಊರಿಗೆಲ್ಲಾ ಒಂದು ಕಾನೂನಾದರೆ ಈ ಪ್ರಭಾವಿ ವ್ಯಕ್ತಿಗೆ ಒಂದು ಕಾನೂನಾಗಿದೆ. ಮೆಸ್ಕಾಂ ಇಲಾಖೆಯ 11 ಕೆ.ವಿ. ಲೈನ್‌ಅನ್ನು ಕಟ್ಟಡದ ಮೇಲ್ಭಾಗದಲ್ಲಿ ಎಳೆದುಕೊಂಡು ಹೋಗಿ ಎಂದು ಬೃಹತ್ ಗಾತ್ರದ ವಿದ್ಯುತ್‌ನ ನಾಲ್ಕು ಕಂಬಗಳನ್ನು ತಂದು ರಸ್ತೆಯ ಬದಿಯಲ್ಲಿಟ್ಟಿದರೂ ಇದರಿಂದ ಸಾರ್ವಜನಿಕರನ್ನು ಇನ್ನಷ್ಟು ಕುಪಿತರನ್ನಾಗಿಸಲು ಕಾರಣವಾಗಿದೆ.

ಗೋಪಾಲಕೃಷ್ಣ ಬೇಳೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅಭಿನಂದನೆ ಸ್ವೀಕರಿಸುವ ಸಂದರ್ಭದಲ್ಲಿ ನಾನು ಉಳಿದ ತೀರ್ಥಹಳ್ಳಿ ರಸ್ತೆಯ ಮೂರು ನೂರು ಮೀಟರ್ ದೂರ ಡಬಲ್ ರಸ್ತೆಗೆ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಮುಂದುವರಿಸುವುದಾಗಿ ಹೇಳಿ ನಂತರದಲ್ಲಿ ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ಚುರುಕುಗೊಳಿಸಿದ್ದು ಅಲ್ಲಿ ಇರುವ ಹಾಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೇ ರಸ್ತೆ ಬಿಚಾವಣೆ ಕಾರ್ಯ ಮಾಡುತ್ತಿದ್ದು ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಎಷ್ಟು ಜನ ಆಹುತಿಯಾಗಬೇಕು ಎಂದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಪಿಡಬ್ಲ್ಯೂಡಿ ಅಧಿಕಾರಿಗಳ ಮತ್ತು ಗ್ರಾಮಾಡಳಿತದ ಉತ್ತರನ ಪೌರುಷ :
ಲೋಕೋಪಯೋಗಿ ಇಲಾಖೆಯವರು ಮತ್ತು ಪಂಚಾಯ್ತಿ ಆಡಳಿತ ಮಂಡಳಿಯವರು ಊರಿನ ಅಭಿವೃದ್ದಿ ಕಾರ್ಯಕ್ಕೆ ಕಂಟಕವಾಗಿರುವ ಪ್ರಭಾವಿ ವ್ಯಕ್ತಿಯ ಅಂಗಡಿ ಮುಂಭಾಗದಲ್ಲಿನ ರಸ್ತೆಯಲ್ಲಿ ಅಳವಡಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಗಿರುವುದನ್ನು ದುರಸ್ತಿಗೊಳಿಸಲು ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಬೃಹತ್ ಹೊಂಡವೊಂದನ್ನು ತೆಗೆಯಲಾಗಿದ್ದು ಇದರಿಂದ ಗ್ರಾಹಕರು ವ್ಯಾಪಾರ ವಹಿವಾಟಿಗೆ ಅಂಗಡಿಗೆ ಬರದಂತೆ ಮಾಡಿದ್ದಾರೆಂದು ಅಂಗಡಿ ಮಾಲೀಕನು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಒಂದು ವಾರದ ಕಾಲ ಹೊಂಡವನ್ನು ಮುಚ್ಚದೇ ಕಾಲ ಕಳೆಯುವಂತಾಯಿತು.

ಅಪಘಾತಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಕಂಬಗಳು :
ತೀರ್ಥಹಳ್ಳಿ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಕೂಡಾ ರಸ್ತೆಯಂಚಿನಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಜಲ್ಲಿಕಲ್ಲು ಬಿಚಾವಣೆ ಮಾಡುತ್ತಿದ್ದು ಅಪಘಾತಕ್ಕೆ ಆಹ್ವಾನಿಸುವಂತಿವೆ.

ಗುತ್ತಿಗೆದಾರನಿಗೆ ಬೇಗ ಕೆಲಸ ಮುಗಿದರೆ ಸಾಕು ಎಂಬ ಚಿಂತೆ. ವಾಹನಸವಾರರಿಗೆ ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬ ಭಯ. ಈ ಎರಡರ ಮಧ್ಯೆ ಸಾರ್ವಜನಿಕರು ಓಡಾಡದಂತಾಗಿರುವುದು ಮಾತ್ರ ಎಡಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಆನಿವಾರ್ಯತೆ ಎದುರಾಗಿದೆ. ಸಂಜೆಯಾಯಿತ್ತೆಂದರೆ ತೀರ್ಥಹಳ್ಳಿ ರಸ್ತೆಯ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಎರಡು ಬಾರ್ ಅಂಡ್ ರೆಸ್ಟೋರೆಂಟ್‌ಗಳಿಂದಾಗಿ ರಸ್ತೆಯಂಚಿನಲ್ಲಿ ಭಾರಿ ವಾಹನಗಳ ದಟ್ಟಣೆಯಿಂದಾಗಿ ಪ್ರಯಾಣಿಕರು ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ.

ಒಟ್ಟಾರೆಯಾಗಿ ರಿಪ್ಪನ್‌ಪೇಟೆಯಲ್ಲಿ ಕಳೆದ ಐದಾರು ತಿಂಗಳಿಂದ ದೂಳಿನ ಮಯದಿಂದ ಮುಕ್ತಿಯಿಲ್ಲದೆ ಪರಿತಪ್ಪಿಸುವಂತಾಗಿದೆ. ಅತ್ತ
ಕಟ್ಟಡ ತೆರವುವಾಗಲಿಲ್ಲ. ಇತ್ತ ಕಾಮಗಾರಿ ಮುಗಿಯುವುದಿಲ್ಲ. ಇಲ್ಲಿ ಕಿರಿಕಿರಿ ಅಂತೂ ತಪ್ಪಿದಲ್ಲ ಎನ್ನುವಂತಾಗಿದೆ ರಿಪ್ಪನ್‌ಪೇಟೆಯ ರಸ್ತೆ ಅಗಲೀಕರಣದ ಅಭಿವೃದ್ಧಿ ಕಾಮಗಾರಿ ಸ್ಥಿತಿ.

Leave a Comment

error: Content is protected !!