ಮಳೆಗಾಲದಲ್ಲಿ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ ; ಶಾಸಕ ಬೇಳೂರು ಗೋಪಾಲಕೃಷ್ಣ ತಾಕೀತು

Written by Malnadtimes.in

Published on:

WhatsApp Group Join Now
Telegram Group Join Now

Hosanagara | ಮುಂಗಾರು ಮಳೆ ಉತ್ತಮವಾಗಿ ಆರಂಭಗೊಳ್ಳುವ ನಿರೀಕ್ಷೆಯಿದ್ದು, ಮಳೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಹರತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಂಬೆಕೊಪ್ಪ ಗ್ರಾಮದಲ್ಲಿ ನಿನ್ನೆಯ ಭಾರಿ ಮಳೆಗೆ ಮನೆ ಕಳೆದುಕೊಂಡ ಮಣಿ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿ, ವಯಕ್ತಿಕ ಧನ ಸಹಾಯ ಮಾಡಿದ ಅವರು, ಮಳೆಗಾಲ ಮುಗಿಯುವವರೆಗೂ ಎಲ್ಲಾ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರುವಂತೆ ತಾಕೀತು ಮಾಡಿದರು.

ಸದ್ಯಕ್ಕೆ ಉತ್ತಮ ಮಳೆ ಆಗುವ ವಾತಾವರಣ ಕಂಡು ಬರುತ್ತಿದ್ದು, ರೈತರ ಕೆಲಸಗಳು ಆರಂಭಗೊಂಡಿವೆ . ಸರ್ಕಾರ ಕೂಡಾ ರೈತರಿಗೆ ಉತ್ತಮ ಬೀಜ, ಗೊಬ್ಬರ ಸಿಗುವಂತೆ ಈಗಾಗಲೇ ಕ್ರಮ ಕೈಗೊಂಡಿದೆ. ಆದರೆ ಎಲ್ಲಿಯೂ ವ್ಯತ್ಯಾಸವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.

ನಿನ್ನೆಯ ಮಳೆಗೆ ದೊಂಬೆಕೊಪ್ಪ ಗ್ರಾಮದ ಮಣಿ ಎಂಬುವವರ ಮನೆ ಮೇಲೆ ಮರ ಉರುಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ನಿನ್ನೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ ಸಣ್ಣಕ್ಕಿ ಅವರು, ಶಾಸಕರ ಭೇಟಿ ಮತ್ತು ಸಹಕಾರದ ಭರವಸೆಯನ್ನು ಕುಟುಂಬಕ್ಕೆ ನೀಡಿದ್ದರು. ಅದರಂತೆ ಬೇಳೂರು ಗೋಪಾಲಕೃಷ್ಣ ಅವರು ಇಂದು ಭೇಟಿ ನೀಡಿ ಮನೆ ಕಳೆದುಕೊಂಡ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರಗಳ ಧನ ಸಹಾಯ ನೀಡಿ, ಸರ್ಕಾರದಿಂದ ಬರುವ ಸಹಾಯ ಮತ್ತು ನೆರವನ್ನು ಒದಗಿಸಿಕೊಡುವ ಭರವಸೆ ನೀಡಿದರು.

ಜೊತೆಗೆ ನಿರಾಶ್ರಿತ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಹರಿದ್ರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಆರ್.ಮಂಜುನಾಥ, ಮುಖಂಡರುಗಳಾದ ಮಂಡಗಳಲೆ ಗಣಪತಿ, ಶೇಖರಪ್ಪ ಗೌಡ, ಸಾಕಮ್ಮ ಮನೋಹರ್, ಗುಡ್ಲೇಕೇವಿ ಹಿರಿಯಪ್ಪ, ಇಕ್ಬಾಲ್, ಏರ್ಟೆಲ್ ಚಂದ್ರು, ಸಾಧಿಕ್ ಅಲಿ, ಶಿವಮೂರ್ತಿ ಹರತಾಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು .

Leave a Comment

error: Content is protected !!