ಕನ್ಸರ್‌ವೆನ್ಸಿ ರಸ್ತೆ ಮೇಲೆ ವಿದ್ಯುತ್ ಕಂಬ, ಬಡಾವಣೆದಾರರಿಂದ ಶಾಸಕರಿಗೆ ದೂರು, ತೆರವಿಗೆ ಸೂಚನೆ

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿ 26ರ ಸಂಪರ್ಕದ ಗ್ರಾಮ ಪಂಚಾಯತಿ ಹಿಂಭಾಗದ ಕನ್ಸರ್‌ವೆನ್ಸಿ ರಸ್ತೆಯಲ್ಲಿ ಮೆಸ್ಕಾಂ ಇಲಾಖೆಯವರು ರಸ್ತೆ ಅಗಲೀಕರಣ ಕಾಮಗಾರಿಯೊಂದಿಗೆ 11 ಕೆ.ವಿ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನ್ಯಾಯಾಲಯದ ಆದೇಶವಿರುವ 8 ಅಡಿ ಅಗಲ 155 ಅಡಿ ಉದ್ದದ ರಸ್ತೆಯ ಮಧ್ಯದಲ್ಲಿ ಕಂಬ ಹಾಕಿರುವುದರ ಬಗ್ಗೆ ಬಡಾವಣೆಯ ನಿವಾಸಿಗಳು ಇಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಇವರಿಗೆ ಮನವಿ ಮೂಲಕ ತೆರವುಗಳಿಸುವಂತೆ ಆಗ್ರಹಿಸಿದರ ಮೇರೆಗೆ ಶಾಸಕರು ಸ್ಥಳದಿಂದಲೇ ಗುತ್ತಿಗೆದಾರನಿಗೆ ಕೂಡಲೇ ಅಳವಡಿಸಲಾದ ಕಂಬವನ್ನು ಕಿತ್ತು ಬೇರೆ ಕಡೆಗೆ ಹಾಕಿ ಬಡಾವಣೆಯವರಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ :

ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಗರ-ತೀರ್ಥಹಳ್ಳಿ ಸಂಪರ್ಕದ ರಾಜ್ಯ ಹೆದ್ದಾರಿ 26ರಲ್ಲಿನ ವಿನಾಯಕ ವೃತ್ತದಿಂದ ಎಪಿಎಂಸಿ ಬಳಿಯ ಒಂದು ಕಿ.ಮೀ. ದ್ವಿಪಥ ರಸ್ತೆ ಕಾಮಗಾರಿಗೆ 485 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸಿ ಕಾಮಗಾರಿ ಚುರುಕುಗೊಳಿಸಲಾಗಿದ್ದು ಒಳಚರಂಡಿ ಮತ್ತು ಡಿವೈಡರ್ ಹಾಗೂ ಅಗಲೀಕರಣದ ರಸ್ತೆಯಂಚಿಗೆ ಜಲ್ಲಿ ಕಲ್ಲು ಹಾಕಿಕೊಳ್ಳುತ್ತಾ ಇದ್ದು ಮಳೆಯ ಕಾರಣ ಡಾಂಬರೀಕರಣ ಕಾರ್ಯ ವಿಳಂಬವಾಗುತ್ತಿದೆ. ಇನ್ನೊಂದು ವಾರದೊಳಗೆ ಸಾಗರ ರಸ್ತೆಯ ದ್ವಿಪಥ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಭಿವೃದ್ಧಿಗೆ ಹೆಚ್ಚು ಒತ್ತು :

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಯಲ್ಲಿ ಘೋಷಿಸಲಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಇನ್ನಿತರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮಧ್ಯದಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿನ ಹಲವು ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ವಿದ್ಯುತ್ ಲೈನ್ ಅಳವಡಿಕೆಗೆ ಅಡ್ಡಿಯಾಗದಂತೆ ಕ್ರಮ :

ದ್ವಿಪಥ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯಂಚಿನಲ್ಲಿರುವ 11 ಕೆ.ವಿ.ಲೈನ್ ಕಂಬಗಳನ್ನು ಸಹ ಸ್ಥಳಾಂತರ ಮಾಡಬೇಕಾಗಿದ್ದು ಸಾರ್ವಜನಿಕರು ಯಾವುದೇ ಮುಲಾಜಿಲ್ಲದೆ ತಮ್ಮ ಅಂಗಡಿ ಮುಂದೆ ಜಾಗ ತೆರವುಗೊಳಿಸಿ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಅಂಗಡಿ ಮಾಲೀಕರಲ್ಲಿ ಮನವಿ ಮಾಡಿದರು. ಅದಕ್ಕೂ ಮಿಕ್ಕಿ ಅಡ್ಡಿಪಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುವುದೆಂದು ಎಚ್ಚರಿಕೆ ನೀಡಿದರು.

ಮತಯಾಚನೆ :

ಜೂನ್ 3 ರಂದು ನಡೆಯುವ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಕೆ.ಕೆ.ಮಂಜುನಾಥ ಪರವಾಗಿ ಇಲ್ಲಿನ ಸರ್ಕಾರಿ ಪದವಿ ಕಾಲೇಜ್‌ಗೆ ಶಾಸಕ ಹಾಗೂ ರಾಜ್ಯ ಆರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಉಪನ್ಯಾಸಕರಲ್ಲಿ ಮತಯಾಚನೆ ನಡೆಸಿದರು.

ಮುಖಂಡರಾದ ಬಿ.ಜೆ.ಚಂದ್ರಮೌಳಿ, ಹೆಚ್.ವಿ.ಈಶ್ವರಪ್ಪಗೌಡ, ಸುಬ್ರಹ್ಮಣ್ಯ ಸಂಪೆಕಟ್ಟೆ, ಧನಲಕ್ಷ್ಮಿ, ಕೆರೆಹಳ್ಳಿ ರವೀಂದ್ರ, ಶ್ರೀಧರ, ರಮೇಶ್, ರಾಜುಗೌಡ, ನವೀನ ಕೆರೆಹಳ್ಳಿ, ಶ್ರೀನಿವಾಸ ಆಚಾರ್, ಶೈಲಾ ಆರ್.ಪ್ರಭು, ಚಾಮುಂಡಮ್ಮ, ಸಾವಿತ್ರಿ, ಗುರುರಾಜ್ ಇನ್ನಿತರರು ಹಾಜರಿದ್ದರು.

Leave a Comment

error: Content is protected !!