RIPPONPETE | ಶ್ರಾವಣ ಶುಕ್ಲ ಸಪ್ತಮಿಯ ಪ್ರಾತಃಕಾಲದಲ್ಲಿ ಜೈನ ಧರ್ಮದ ಸಿದ್ಧಾಂತಗಳನ್ನು ದೇಶದೆಲ್ಲೆಡೆ ಪ್ರಚುರಪಡಿಸಿದ 23ನೇ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮಿಯವರ ಮೋಕ್ಷ ಕಲ್ಯಾಣ ಸುದಿನವನ್ನು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀಪಾರ್ಶ್ವನಾಥ ತೀರ್ಥಂಕರ ಜಿನಮಂದಿರದಲ್ಲಿ ಆಗಮೋಕ್ತ ವಿಧಿಯಂತೆ ನೆರವೇರಿಸಲಾಯಿತು.
ಶ್ರೀಕ್ಷೇತ್ರ ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು “ಮನ ಕಾಯ ವಚನ ಭ್ರಷ್ಟರಾಗದೇ ಘೋರ ಉಪಸರ್ಗಗಳು ಎದುರಾದರೂ ಕ್ಷಮಾ-ಸಂಯಮ ಗುಣಗಳಿಂದ ಆತ್ಮಸ್ಥೆರ್ಯ ಹೊಂದಿದ್ದ ಶ್ರೀ ಪಾರ್ಶ್ವನಾಥ ಸ್ವಾಮಿಯವರ ಜೀವಿತಾವಧಿಯಲ್ಲಿ ಜೀವನ ಧರ್ಮದ ಕುರಿತು ಮಾನವ ಕಲ್ಯಾಣಕ್ಕೆ ಸಹಕಾರಿಯಾಗಬಲ್ಲ ಮೋಕ್ಷ ಮಾರ್ಗದ ಅರಿವನ್ನು ಮೂಡಿಸಿರುವರು” ಎಂದು ಪ್ರವನಚದಲ್ಲಿ ತಿಳಿಸಿದರು.
ಶ್ರೀಕ್ಷೇತ್ರದಲ್ಲಿ ಅಷ್ಟವಿಧಾರ್ಚನೆ, ಶೋಡಶೋಪಚಾರರ ಪೂಜೆಯನ್ನು ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಪೂಜ್ಯ ಸ್ವಸ್ತಿಶ್ರೀಗಳ ದಿವ್ಯ ಸಾನಿಧ್ಯ, ಮಾರ್ಗದರ್ಶನದಲ್ಲಿ ಸಮರ್ಪಿಸಲಾಯಿತು. ನಿರ್ವಾಣ ಲಾಡು ಅರ್ಪಿಸಿ, ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬವನ್ನು ಭಕ್ತವೃಂದದವರು ಉತ್ಸವ ನೆರವೇರಿಸಿದರು. ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನಿರ್ವಾಣ ಕಲ್ಯಾಣದ ವಿಶೇಷ ಪೂಜೆಯಲ್ಲಿ ಭಕ್ತಸಮುದಾಯದವರು ಪಾಲ್ಗೊಂಡರು.
ತ್ರಿಕೂಟ ಜಿನಾಲಯದ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಜೈನ ಧರ್ಮದಲ್ಲಿ ‘ಮುಕುಟ ಸಪ್ತಮಿ’ ಆಚರಣೆಯು ದ್ವೇಷ ಅಸೂಯೆ ತ್ಯಜಿಸಿ ಆತ್ಮೋನ್ನತಿಗಾಗಿ ಸದಾ ಸಹನಶೀಲರಾಗುವಂತೆ ಪ್ರೇರೇಪಿಸುತ್ತದೆ.