HOSANAGARA | ಹಲವು ದಶಕದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತ ಗ್ರಾಮ ಎಂದೇ ಖ್ಯಾತಿ ಹೊಂದಿರುವ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲುವೀಡಿ-ಅಬ್ಬಿಗಲ್ಲು ಗ್ರಾಮಕ್ಕೆ ಸಮೀಪ ಇರುವ ಗೊಗ್ಗಿ ಅವಳಿ ಗ್ರಾಮಗಳ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಆ ಭಾಗದ ಗ್ರಾಮಸ್ಥರ ಕೂಗು ಕೇಳಿ ಬರುತ್ತಿದ್ದರೂ, ಈವರೆಗೂ ಆ ಧ್ವನಿ ಸಂಬಂಧಪಟ್ಟವರಿಗೆ ತಲುಪದಿರುವುದು ವಿಷಾಧದ ಸಂಗತಿಯಾಗಿದೆ.
ಇಟ್ಟಕ್ಕಿ ಮುಖ್ಯರಸ್ತೆಯಿಂದ ಮೇಲಿನಗೊಗ್ಗಿ ಹಾಗೂ ಕೆಳಗಿನಗೊಗ್ಗಿ ಗ್ರಾಮಗಳಿಗೆ ತೆರಳಲು ಎರಡು ಅವಳಿ ಹಳ್ಳಗಳನ್ನು ದಾಟಬೇಕಿದ್ದು, ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿಯುವ ಕಾರಣ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಶಾಲಾ ವಿದ್ಯಾರ್ಥಿಗಳು, ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಇದರಿಂದ ಭಾರಿ ತೊಂದರೆಯಾಗುತ್ತಿದೆ. ಈ ಬಾರಿ ಸುರಿದ ಮಳೆಗೆ ವಿದ್ಯಾರ್ಥಿಗಳು ಶಾಲೆಯ ಕಡೆಗೆ ಮುಖ ಮಾಡಲಾಗದಿರುವುದು ಗ್ರಾಮಸ್ಥರಲ್ಲಿ ದಿಕ್ಕೇ ತೋಚಿದಂತೆ ಮಾಡಿದೆ. ಇದು ಹೀಗೆ ಮುಂದುವರೆದಲ್ಲಿ ಮುಂದೇನು?! ಎಂಬ ಪ್ರಶ್ನೆ ಗೊಗ್ಗಿ ಗ್ರಾಮಸ್ಥರನ್ನು ಈಗಲೂ ಕಾಡುತ್ತಿದೆ.
ಮೇಲಿನಗೊಗ್ಗಿ-ಕೆಳಗಿನಗೊಗ್ಗಿ ಗ್ರಾಮಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಕಡು ಬಡ ಕುಟುಂಬಗಳು ವಾಸವಿದ್ದು, ಸಂಪರ್ಕ ಕೊರತೆಯ ಕಾರಣ ಹೊರಗಿನ ಆಧುನಿಕ ಪ್ರಪಂಚದಿಂದ ದೂರವೇ ಉಳಿದಿದೆ.
ಈ ಭಾಗದಲ್ಲಿ ಹರಿಯುವ ಅವಳಿ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಲ್ಲಿ ಮುಕ್ತವೇ ಶಾಶ್ವತ ಪರಿಹಾರ ನೀಡಲು ಸಾಧ್ಯ ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಗ್ರಾಮಸ್ಥರ ಕೂಗಿಗೆ ಕಿವಿಗೊಡುವರೆ ಕಾದು ನೋಡಬೇಕಿದೆ.
ಈ ಹಿಂದೆ 30 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ, ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗಿತ್ತು. ಕಾರಣಾಂತರದಿಂದ ಸೇತುವೆ ನಿರ್ಮಾಣ ಕಾಮಗಾರಿಗೆ ಹಿನ್ನಡೆ ಆಯ್ತು. ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾದ ಆರಗ ಜ್ಞಾನೇಂದ್ರ ಇತ್ತ ಚಿತ್ತ ಹರಿಸಬೇಕು.
– ತೊಗರ ಕೃಷ್ಣಮೂರ್ತಿ, ತ್ರಿಣಿವೆ ಗ್ರಾ.ಪಂ. ಸದಸ್ಯ