RIPPONPETE | ಕುಡುಕರ ಆಶ್ರಯ ತಾಣವಾಗಿ ಗಬ್ಬೆದ್ದು ನಾರುತ್ತಿದೆ ರಿಪ್ಪನ್‌ಪೇಟೆ ಬಸ್ ನಿಲ್ದಾಣ !

Written by Malnadtimes.in

Published on:

WhatsApp Group Join Now
Telegram Group Join Now

RIPPONPETE | ಇಲ್ಲಿನ ಹೃದಯ ಭಾಗವಾಗಿರುವ ಸಾರ್ವಜನಿಕ ಬಸ್ ತಂಗುದಾಣ ಜಾನುವಾರುಗಳ ಮತ್ತು ಕುಡುಕರ ಅನೈತಿಕ ಚಟುವಟಿಕೆಯ ತಾಣವಾಗಿದ್ದು ಇಲ್ಲಿ ಕೇಳೋರು ಇಲ್ಲ, ಹೇಳೋರಿಲ್ಲದಂತಾಗಿ ಪ್ರಯಾಣಿಕರು ಬಸ್ ನಿಲ್ದಾಣದೊಳಗೆ ಹೋಗದೆ ಚಂಡಿಯ ಬದಿ ನಿಂತು ಬಸ್ ಹತ್ತಿ ಇಳಿಯುವಂತಾಗಿದೆ.

ಬಸ್ ನಿಲ್ದಾಣಕ್ಕೆ ಸಮೀಪವೇ ಎರಡು ಬಾರ್
ಅಂಡ್ ರೆಸ್ಟೋರೆಂಟ್‌ಗಳು ಇದ್ದು ಅಲ್ಲಿ ಕಂಠ ಮಟ್ಟ ಮದ್ಯ ಸೇವಿಸಿ ಬಂದು ಬಸ್ ನಿಲ್ದಾಣದೊಳಗೆ ಬಟ್ಟೆಯ ಪರಿವೇ ಇಲ್ಲದೆ ಎಲ್ಲೆಂದರಲ್ಲಿ ಬಿದ್ದು ಮೂತ್ರ ವಿಸರ್ಜನೆ ಮಾಡುವುದು ಮಲಗಿ ನಿದ್ರಿಸುವುದು ಹೀಗೆ ಅಸಭ್ಯವಾಗಿ ತಂಗುದಾಣದೊಳಗೆ ನಡೆದುಕೊಳ್ಳುತ್ತಿದ್ದು ಪರಿಣಾಮ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಗಾಳಿ, ಮಳೆ, ಬಿಸಿಲಿನಲ್ಲಿ ಬಸ್ ಪ್ರಯಾಣಕ್ಕೆ ಚರಂಡಿಯ ಬಳಿ ಛತ್ರಿ ಹಿಡಿದುಕೊಂಡು ನಿಲ್ಲುವಂತಾಗಿದೆ.

ಜೈನರ ದಕ್ಷಿಣ ಕಾಶಿ ಹೊಂಬುಜ ಮಠಕ್ಕೆ, ಕೊಲ್ಲೂರು ಮೂಕಾಂಬಿಕಾ ದೇವಿ, ಸಿಗಂದೂರು ಚೌಡೇಶ್ವರಿ, ಕೊಡಚಾದ್ರಿ, ಮುರುಡೇಶ್ವರ ಹೀಗೆ ಪ್ರೇಕ್ಷಣೀಯ ಸ್ಥಳಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನ ರಿಪ್ಪನ್‌ಪೇಟೆ ನಿತ್ಯ ಒಂದಲ್ಲಾ ಒಂದು ಸುದ್ದಿಯಲ್ಲಿ ಪ್ರಚಲಿತಗೊಂಡಿರುವ ಇಲ್ಲಿ ಬಸ್ ನಿಲ್ದಾಣದ ಕಥೆ ನೋಡಿದವರಿಗೆ ವಾಕರಿಕೆ ಬರುವಂತಾಗಿದೆ.

ಈ ಬಸ್ ನಿಲ್ದಾಣ ಸ್ವಚ್ಚತೆ ಇಲ್ಲದೆ ಜಾನುವಾರುಗಳ ಕೊಟ್ಟಿಗೆಯಂತಾಗಿ ತಿಪ್ಪೆಗುಂಡಿಯಂತಾಗಿದ್ದರೂ ಕೂಡಾ ನಮ್ಮ ದೂರದ ಪ್ರಯಾಣಿಕರು ಬೇರೆ ಜಾಗವಿಲ್ಲದೆ ಅನಿವಾರ್ಯವಾಗಿ ತಿಪ್ಪೆಗುಂಡಿಯಂತಾಗಿರುವ ತಂಗುದಾಣದಲ್ಲಿ ನಿಂತು ಮುಂದಿನ ಊರುಗಳಿಗೆ ತೆರಳಬೇಕಾಗಿದ್ದು ಇದರ ಮದ್ಯ ಸೇವಿಸಿದವರ ಬಯಲು ನಾಟಕವನ್ನು ನೋಡಿ ಮುಖ ಮುಚ್ಚಿಕೊಂಡು ಬೇರೆ ಕಡೆಗೆ ತೆರಳಬೇಕಾಗಿದೆ.

ಮಾನ ಮರ್ಯಾದೆ ಅಂಜಿ ಕೆಲವರು ಕೈ ಮುಗಿದು ನಮಗೆ ಹೋಟೆಲ್ ಅಥವಾ ಯಾವುದಾರು ಅಂಗಡಿ ಮುಂದೆ ನಿಂತು ಪ್ರಯಾಣ ಬೆಳೆಸುವುದಾಗಿ ಗೊಣಗುತ್ತು ಇಲ್ಲಿನ ಸ್ಥಿತಿ ಗತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ತೆರಳುತ್ತಿರುವುದು ನಿತ್ಯ ಪರಿಪಾಠವಾಗಿದೆ.

ಸೋಮವಾರ ಸಂತೆಯ ದಿನ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಸಂಜೆ ಸಮಯದಲ್ಲಿ ಕುಡುಕರು ಇಬ್ಬರು ಗಲಾಟೆ ಮಾಡಿಕೊಂಡು ಕೈಕೈ ಮಿಲಾಯಿಸಿ ಕೊನೆಗೆ ಇಂಟರ್ ಲಾಕ್ ಕಲ್ಲುಗಳನ್ನು ಪರಸ್ಪರ ಎತ್ತಿಕೊಂಡು ಬೀಸುವ ಹಂತ ತಲುಪಿ ಕೊನೆಗೆ ಅಲ್ಲೆ ಯಾರೋ ಇಬ್ಬರಿಗೆ ಹೆದರಿಸಿ ಕಳುಹಿಸಿದ ಘಟನೆ ಸಹ ನಡೆದಿದೆ.

ಒಟ್ಟಾರೆಯಾಗಿ ಇಲ್ಲಿನ ತಂಗುದಾಣ ಸ್ವಚ್ಚತೆಯಿಲ್ಲದೆ ತಿಪ್ಪೆಗುಂಡಿಯಂತಾಗಿ ಕುಡುಕರ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು ಇನ್ನಾದರು ಸಂಬಂಧಿಸಿದ ಗ್ರಾಮಾಡಳಿತ ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳು ಗಮಹರಿಸಿ ಬಸ್ ಪ್ರಯಾಣಿಕರ ಗೋಳಿಗೆ ಮುಕ್ತಿ ನೀಡುವರೆ ಕಾದು ನೋಡಬೇಕಾಗಿದೆ.

Leave a Comment

error: Content is protected !!