ಬಡವರ ಒತ್ತುವರಿ ಭೂಮಿ ತೆರವಿಗೆ ರಂಭಾಪುರಿ ಶ್ರೀಗಳ ತೀವ್ರ ವಿರೋಧ

Written by Malnadtimes.in

Published on:

WhatsApp Group Join Now
Telegram Group Join Now

N.R.PURA | ಜೀವನೋಪಾಯಕ್ಕಾಗಿ ಬಡವರು ಮಾಡಿರುವ ಒತ್ತುವರಿ ಭೂಮಿಯನ್ನು ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆಯ ಕ್ರಮ ಸರಿಯಾದುದಲ್ಲವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ಗುರುವಾರ ಶ್ರೀ ರಂಭಾಪುರಿ ಪೀಠದ ಶ್ರಾವಣ ಪೂಜಾನುಷ್ಠಾನದ ಸಂದರ್ಭದಲ್ಲಿ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಪರಿಸರ ಸಂರಕ್ಷಣೆ ವಿಚಾರದಲ್ಲಿ ಯಾರದೂ ವಿರೋಧವಿಲ್ಲ. ಆದರೆ ಒತ್ತುವರಿ ತೆರವು ನೆಪದಲ್ಲಿ ಬಡವರ ಭೂಮಿ ತೆರವುಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗಯಲ್ಲ. ಮಲೆನಾಡಿನಲ್ಲಿ ಸಣ್ಣ ಸಣ್ಣ ಬಡ ಕುಟುಂಬಗಳು ಬದುಕುತ್ತಿವೆ. 1-2 ಎಕರೆ ಭೂಮಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡವರುಂಟು. ಅವರಿಗೆ ಯಾವುದೇ ತಿಳುವಳಿಕೆ ನೀಡದೆ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಕತ್ತರಿಸಿ ಹಾಕುತ್ತಿರುವುದು ನೋವಿನ ಸಂಗತಿ. ಇದರಿಂದ ಸಹಸ್ರಾರು ಬಡ ಕುಟುಂಬಗಳು ಬೀದಿಗೆ ಬರಲಿವೆ. ಸರ್ಕಾರ ಎಚ್ಚತ್ತುಕೊಂಡು ಬಡವರ ಭೂಮಿ ತೆರವುಗೊಳಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಬಡವರು ಒತ್ತುವರಿ ಮಾಡಿರುವ ಭೂಮಿ ಅರಣ್ಯ ವ್ಯಾಪ್ತಿಗೆ ಬರುವುದಾದರೆ ಅದನ್ನು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಒತ್ತುವರಿ ಮಾಡಿರುವ ರೈತರಿಗೆ ಸಕ್ರಮ ಮಾಡಿಕೊಡಲಿ. ಸಾವಿರಾರು ಎಕರೆ ಒತ್ತುವರಿ ಮಾಡಿರುವ ಭೂ ಮಾಲೀಕರು, ಕಾರ್ಪೋರೇಟ್ ಕಂಪನಿಗಳು ಮತ್ತು ಗಣಿಗಾರಿಕೆ ಮಾಡುತ್ತಿರುವವರ ಬಗೆಗೆ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಬಡವರು ಒತ್ತುವರಿ ಮಾಡಿರುವ ಭೂಮಿಯ ಮೆಲೆ ಇಂಥ ಕಠಿಣ ಕ್ರಮ ಒಳ್ಳೆಯದಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಯವರು ವಿಷಯವನ್ನು ಸರಿಯಾಗಿ ಪರಾಂಬರಿಸಿ ಬಡವರ ಒತ್ತುವರಿ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರ ಹಠಮಾರಿತನ ಮುಂದುವರಿಸಿದರೆ ಮಲೆನಾಡಿನಲ್ಲಿ ಉಗ್ರ ಹೋರಾಟ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರ ಉದಾರ ನೀತಿಯನ್ನು ತಾಳಿ ಬಡವರ ಒತ್ತುವರಿ ಭೂಮಿಯನ್ನು ತೆರವುಗೊಳಿಸುವುದನ್ನು ಸ್ಥಗಿತಗೊಳಿಸಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಮತ್ತೊಮ್ಮೆ ಸರ್ಕಾರಕ್ಕೆ ಎಚ್ಚರಿಸಿದರು.

Leave a Comment

error: Content is protected !!