ಮನುಷ್ಯ ಗುಣದಿಂದ ದೊಡ್ಡವನಾಗಬೇಕು ಹಣದಿಂದಲ್ಲ ; ರಂಭಾಪುರಿ ಶ್ರೀಗಳು

Written by Malnadtimes.in

Published on:

WhatsApp Group Join Now
Telegram Group Join Now

N.R.PURA | ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ದೊಡ್ಡ ತ್ಯಾಗ ಇರುತ್ತದೆ. ತ್ಯಾಗ ಮತ್ತು ಪರಿಶ್ರಮ ಇಲ್ಲದೇ ಯಾವುದೂ ಸಿದ್ಧಿಸುವುದಿಲ್ಲ. ಮನುಷ್ಯ ಹಣದಿಂದ ದೊಡ್ಡವನಾಗದೇ ಗುಣದಿಂದ ದೊಡ್ಡವನಾಗಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಪೂಜಾನುಷ್ಠಾನ ಹಾಗೂ ಲಿಂ.ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸತ್ಯದ ದಾರಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ಆ ದಾರಿ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ. ಬೆಂಕಿಯಲ್ಲಿ ಬೆಂದಷ್ಟು ಚಿನ್ನ ಹೊಳೆಯುವ ಹಾಗೆ ಸಂಕಟಗಳನ್ನು ಅನುಭವಿಸಿದಷ್ಟು ಮನುಷ್ಯ ಜ್ಞಾನಿಯಾಗುತ್ತಾನೆ. ಗುರಿ ಇಟ್ಟುಕೊಂಡು ಸಾಗುವವರು ಸಾಧಕರಾಗುತ್ತಾರೆ. ಆಶೆಗಳನ್ನು ಇಟ್ಟುಕೊಂಡು ಸಾಗುವವರು ಸಾಮಾನ್ಯರಾಗಿ ಉಳಿಯುತ್ತಾರೆ. ಮನುಷ್ಯನಿಗೆ ಮರಣ ಇರುತ್ತದೆ. ಆದರೆ ಒಳ್ಳೆತನಕ್ಕೆ ಮರಣ ಇರುವುದಿಲ್ಲ. ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ ಹಣಬಲ ತೋಳಬಲ ಇದ್ದರೆ ಸಾಲದು. ದೈವಬಲ ಅಗತ್ಯವಾಗಿದೆ. ದುರ್ಯೋಧನನಿಗೆ ಎಲ್ಲವೂ ಇತ್ತು ಆದರೆ ದೈವಬಲ ಇರಲಿಲ್ಲ. ತಿಳುವಳಿಕೆಗಿಂತ ನಡವಳಿಕೆಗಳು ಶ್ರೇಷ್ಠ. ತಿಳುವಳಿಕೆ ಸೋಲಬಹುದು. ಆದರೆ ಉತ್ತಮ ನಡವಳಿಕೆ ಎಂದಿಗೂ ಸೋಲುವುದಿಲ್ಲ. ವೀರಶೈವ ಧರ್ಮ ಅರಿವು ಆದರ್ಶಗಳನ್ನು ಕೊಟ್ಟಿದೆ. ಶ್ರೀ ಗುರುವಿಗೆ ಎಲ್ಲಾ ಧರ್ಮಗಳಲ್ಲಿ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಲಿಂ.ಶ್ರೀ ರಂಭಾಪುರಿ ರುದ್ರಮುನಿ ಜಗದ್ಗುರುಗಳು ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಜೀವನದಲ್ಲಿ ಶ್ರೇಯಸ್ಸು ಕಂಡವರು. ಕಿರಿ ವಯಸ್ಸಿನಲ್ಲಿ ಹೆತ್ತ ತಂದೆ ತಾಯಿ ತಾರುಣ್ಯಾವಸ್ಥೆಯಲ್ಲಿ ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು ಘನ ವಿದ್ವಾಂಸರಾದರು. ಶ್ರೀ ಜಗದ್ಗುರು ರಂಭಾಪುರಿ ಪೀಠವನ್ನು ಆರೋಹಣ ಮಾಡಿ ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ ನಿರ್ಮಿಸುವುದರ ಮೂಲಕ ಶ್ರೀಪೀಠ ಕೃತಜ್ಞತೆಯನ್ನು ಸಲ್ಲಿಸಿದೆ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಲಿಂ.ಶ್ರೀ ರುದ್ರಮುನಿ ಜಗದ್ಗುರುಗಳವರು ಶಿಕ್ಷಣ ಮತ್ತು ಸಂಸ್ಕಾರಕ್ಕೆ ಆದ್ಯತೆಯನ್ನು ಕೊಟ್ಟವರು. ವಿದ್ಯಾರ್ಥಿಗಳ ಮತ್ತು ಬಡಜನರ ಬಗೆಗೆ ಅಪಾರ ಕಾಳಜಿ ಹೊಂದಿದ್ದರು. ಅವರ ನೆನಹು ನಮ್ಮೆಲ್ಲರಿಗೆ ಅರಿವಿನ ದಾರಿಯನ್ನು ತೋರುತ್ತದೆ ಎಂದರು.

ಈ ಪವಿತ್ರ ಸಮಾರಂಭದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯರು, ಚಿಕ್ಕಮಗಳೂರು ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ರಟ್ಟೀಹಳ್ಳಿ ವಿಶ್ವೇಶ್ವರ ದೇವರು, ಸಿದ್ಧಲಿಂಗಯ್ಯ ಶಾಸ್ತ್ರಿಗಳು ಇದ್ದರು.

ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಮಹೇಶ್, ಪ್ರಧಾನ ಕಾರ್ಯದರ್ಶಿ ವೈ.ಸಿ.ಹಾಲೇಶ, ಖಜಾಂಚಿ ಇ.ಆರ್.ಗಂಗಾಧರಯ್ಯ, ಪ್ರಕಾಶ ಬಿ.ಆರ್., ನಂದೀಶ, ದಯಾನಂದ, ಚಂದ್ರಶೇಖರ, ಶಂಕರಗೌಡ, ಪ್ರಶಾಂತ, ಸುಧಾಕರ, ಬಿ.ಬಿ.ರೇಣುಕಾರ್ಯ, ತಿಪಟೂರಿನ ಶಿವಶಂಕರ್, ಹಾನಗಲ್ಲ ಬಸವರಾಜ ಎಲಿ ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದ ಪಡೆದರು.

ಬೆಳಿಗ್ಗೆ ಲಿಂ.ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಲ ಜರುಗಿತಲ್ಲದೇ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲಾ ಸಭಾಂಗಣದಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಪುಷ್ಪಾರ್ಚನೆ ನೆರವೇರಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಹೆಸರಿನಿಂದ ಪ್ರೋತ್ಸಾಹ ಧನ ಕೊಟ್ಟಿರುವುದು ಮತ್ತೊಂದು ವಿಶೇಷವಾಗಿತ್ತು. ಕ್ಷೇತ್ರದ ಎಲ್ಲ ದೈವಕ್ಕೂ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಯಿತು. ಸಮಾರಂಭದ ನಂತರ ಆಗಮಿಸಿದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು. ಆಲ್ದೂರು ಹೋಬಳಿ ವೀರಶೈವ ಸಮಾಜದವರು ಪೂಜಾ ಹಾಗೂ ಅನ್ನ ದಾಸೋಹ ಸೇವೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಕೃಪಾ ಕಾರುಣ್ಯ ಪಡೆದರು.

Leave a Comment

error: Content is protected !!