ಐರಣಿ ಮಠದ ಶಿಷ್ಯರೆಂದು ನಂಬಿಸಿ ಹಣ ದ್ವಿಗುಣಗೊಳಿಸುವುದಾಗಿ ಬಾಕ್ಸ್ ನೀಡಿ ವಂಚಿಸಿದ್ದ ಐವರು ಖದೀಮರು ಅಂದರ್ !

Written by Malnadtimes.in

Published on:

WhatsApp Group Join Now
Telegram Group Join Now

HOSANAGARA / DAVANAGERE | ಐರಣಿ ಮಠದ ಸ್ವಾಮೀಜಿ ಶಿಷ್ಯರೆಂಬ ನೆಪ ಹೇಳಿ, ನೀಡುವ ಹಣಕ್ಕೆ ಹೆಚ್ಚುವರಿ ಸೇರಿಸಿ ಮರಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದ (Fraud) ಐವರು ಆರೋಪಿಗಳನ್ನು ಬಂಧಿಸಿದ ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, 2.80 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ 15 ಲಕ್ಷ ರೂ.ಬೆಲೆಯ 3 ಕಾರು ವಶಪಡಿಸಿಕೊಂಡಿದ್ದಾರೆ‌.

ಚಿಕ್ಕಮಗಳೂರು ಜಿಲ್ಲೆಯ ಇಲಿಯಾಜ್, ದಾವಣಗೆರೆ ಜಿಲ್ಲೆಯ ಕಿರಣ್ , ದಾದಾಪೀರ್, ಮಂಜುನಾಥ್, ಚಿತ್ರದುರ್ಗ ಜಿಲ್ಲೆಯ ಮಹಾಂತೇಶ್ ಬಂಧಿತ ಆರೋಪಿಗಳಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದ ಚಮನ್‌ ಸಾಬ್ ಎಂಬುವರನ್ನು 2023ರ ಅ. 21ರಂದು ಸಂಪರ್ಕಿಸಿದ ಆರೋಪಿಗಳು ನಾವು ಸ್ವಾಮೀಜಿ ಶಿಷ್ಯರು ಎಂದಿದ್ದಾರೆ. ನಮ್ಮ ಬಳಿ 100 ರೂ. ಮುಖಬೆಲೆಯ ನೋಟುಗಳಿದ್ದು, ನೀವು 500 ರೂ. ಮುಖಬೆಲೆ ನೋಟು ನೀಡಿದರೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡಿ ವಂಚಿಸಿದ್ದರು.

ಈ ಘಟನೆ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಹರಿಹರ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಗಳಾದ ಮಂಜುನಾಥ ಎಸ್. ಕುಪ್ಪೇಲೂರು, ಚಿದಾನಂದಪ್ಪ ಹಾಗೂ ಅವರ ತಂಡ, ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಮಾಡಿದೆ.

ಆರೋಪಿ ಕಿರಣ್ ವಿರುದ್ಧ ರಾಮನಗರ ಜಿಲ್ಲೆಯ ಕುದೂರು ಠಾಣೆಯಲ್ಲಿ 2019ರಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

error: Content is protected !!