ಪೊಲೀಸರಿಗೆ ತಲೆನೋವು ತರಿಸಿದ ಸರಣಿ ಮನೆಗಳ್ಳತನ ಪ್ರಕರಣ

Written by Malnadtimes.in

Published on:

WhatsApp Group Join Now
Telegram Group Join Now

HOSANAGARA | ತಾಲೂಕಿನ ನಗರ ಭಾಗದಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಜನರಿಗೆ ಆತಂಕ ತರಿಸಿದರೆ ಪೊಲೀಸರಿಗೆ ತಲೆನೋವು ತರಿಸಿದೆ.

ಆ.14ರಂದು ಕಾನುಗೋಡು ರಾಮಕೃಷ್ಣ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು 1,36,500 ರೂ‌.ಮೌಲ್ಯದ ಚಿನ್ನಾಭರಣ, 4 ಸಾವಿರ ರೂ. ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ.

ಇದೇ ದಿನ ಮಾಸ್ತಿಕಟ್ಟೆ ಸಮೀಪದ ಕಿಲಗಾರು ವಾಸಿ ಸುಜಯ ಗೋಪಾಲ, ಸುಜಯ ಚಂದ್ರಪ್ಪಗೌಡ ಎಂಬುವವರ ಮನೆಯಲ್ಲೂ ಕೂಡ ಕಳ್ಳತನಕ್ಕೆ ಯತ್ನಿಸಿದ ಘಟನೆಗಳು ನಡೆದಿವೆ.

ಪುಟ್ಟಕ್ಕನ ಮನೆ :

ನಗರ ಮಾಸ್ತಿಕಟ್ಟೆ ಮಾರ್ಗದ ಮುಂಡಳ್ಳಿ ಸಮೀಪದ ಪುಟ್ಟಕ್ಕನ ಮನೆಯಲ್ಲೂ ಕಳ್ಳತನ ಮಾಡಿದ ಘಟನೆ ಭಾನುವಾರ ನಡೆದಿದೆ. ಬಂಗಾರದ ಓಲೆ, ಮತ್ತು ಉಂಗುರ ಮತ್ತು ನಗದು ಕಳ್ಳತನ ಮಾಡಲಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಪುಟ್ಟಕ್ಕನ ಮನೆ ಗೇಟ್ ಮುಂಭಾಗ ಕದ್ದ ಮಾಲನ್ನು ವಾಪಾಸು ಇಟ್ಟು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಾಡಹಗಲೇ ಘಟನೆ :

ಕಿಲಗಾರು, ಕಾನುಗೋಡು, ಮುಂಡಳ್ಳಿ ಸೇರಿದಂತೆ ಎಲ್ಲಾ ಪ್ರಕರಣಗಳು ಹಾಡಹಗಲೇ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಕೂಲಿ ಕಾರ್ಮಿಕರ ಮನೆಯನ್ನೇ ಕಳ್ಳತನಕ್ಕೆ ಕೇಂದ್ರೀಕರಿಸಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನದ ಯತ್ನ ಮಾಡಲಾಗುತ್ತಿದ್ದು ಪೊಲೀಸರಿಗೆ ತಲೆನೋವು ತರಿಸಿದೆ.

ಸಿಸಿ ಟಿವಿಗಳು ಇಲ್ಲ :

ಕಳ್ಳತನ ಪ್ರಕರಣ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳವನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ ಆಯ್ದ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಹಿನ್ನಡೆಯಾಗಿದೆ. ಪೊಲೀಸರು ಕರಪತ್ರ ಹಂಚಿ ಜಾಗೃತಿ ಮೂಡಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ನಗರ ಭಾಗದಲ್ಲಿ ಒಂಟಿಮನೆಗಳು ಹೆಚ್ಚು. ಕೂಲಿ ಕಾರ್ಮಿಕರು ಕೂಡ ಹೆಚ್ಚು, ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ಹೋದರೆ ಬರುವುದು ಸಂಜೆಯೇ. ಹೀಗಾಗಿ ಈ ಸಂದರ್ಭ ನೋಡಿಕೊಂಡು ಕಳ್ಳತನ ಯತ್ನ ನಡೆಯುತ್ತಿದೆ.

ನಗರ ಠಾಣೆ ಪಿಎಸ್‌ಐ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

error: Content is protected !!