ಜನಪರ ಮತ್ತು ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸಬೇಕು ; ಕೆ.ವಿ.ಪ್ರಭಾಕರ್

Written by Malnadtimes.in

Published on:

WhatsApp Group Join Now
Telegram Group Join Now

SHIVAMOGGA | ಜನರಿಗೆ ಏನು ಬೇಕೋ ಅಂತಹ ಸುದ್ದಿಗಳನ್ನು ನೀಡಬೇಕು. ಜನಪರವಾಗಿ ಹಾಗೂ ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆ ಕಾಗೋಡು, ಗೇಣಿ, ದಲಿತ, ಸ್ವಾತಂತ್ರ್ಯ ಮುಂತಾದ ಹೋರಾಟಗಳ ತವರು. ಜಿಲ್ಲೆಯ ಪತ್ರಕರ್ತರು ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ಬರವಣಿಗೆ ನಶಿಸುತ್ತಿದೆ. ಕ್ರಿಯಾತ್ಮಕತೆ ದಿನೇ ದಿನೇ ಕ್ಷೀಣಿಸುತ್ತಿದೆ. ಸುದ್ದಿಗಳಲ್ಲಿ ಸಮಾಜ ಪರತೆ ಕಡಿಮೆ ಆಗಿದೆ. ವೈಭವೀಕರಣ ಮತ್ತು ಪೀತ ಪತ್ರಿಕೋದ್ಯಮ ಹೆಚ್ಚುತ್ತಿದೆ. ಈ ಕುರಿತು ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ನಾವು ಯಾವ ರೀತಿಯ ಸುದ್ದಿಗಳನ್ನು ನೀಡಬೇಕೆಂದು ಆಲೋಚಿಸಿ, ಜನ ಮತ್ತು ಸಮಾಜಪರವಾಗಿ ಕೆಲಸ ಮಾಡುವ ತುರ್ತು ಇದೆ ಎಂದರು.

ಗ್ರಾಮೀಣ ಭಾಗದ ಪತ್ರಕರ್ತರ ಬಹುದಿನದ ಬೇಡಿಕೆಯಾಗಿದ್ದ ಉಚಿತ ಬಸ್ ಪಾಸ್ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ. ಪತ್ರಕರ್ತರ ವೈದ್ಯಕೀಯ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಆರೋಗ್ಯ ವಿಮೆ ಜಾರಿಗೆ ತರಲಿದ್ದು ಇದಕ್ಕೆ ಸುಮಾರು ರೂ.10 ಕೋಟಿ ಅವಶ್ಯಕತೆ ಇದೆ. ವಿಮೆ ಕುರಿತಾದ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದ ಅವರು ಸದಾ ಸಮಾಜದ ಕುರಿತು ಚಿಂತನೆ ಮಾಡುವ ಪತ್ರಕರ್ತರು ತಮ್ಮ ಕುಟುಂಬದ ಬಗ್ಗೆಗೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಿವಿ ಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸಂಘ ಪತ್ರಕರ್ತರ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವು ನೀಡುತ್ತಾ ಬಂದಿದೆ. ಪತ್ರಕರ್ತರ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡಲಾಗುತ್ತಿದೆ. ಗ್ರಾಮೀಣ ಬಸ್ ಪಾಸ್ ಯೋಜನೆಗೆ ಅನುಮೋದನೆ ದೊರೆತಿದ್ದು, ಮುಖ್ಯಮಂತ್ರಿಗಳು ಹಾಗೂ ಮಾಧ್ಯಮ ಸಲಹೆಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌ ಪ್ರಸ್ತುತ ಪತ್ರಿಕೋದ್ಯಮದಲ್ಲಿನ ಜೊಳ್ಳು ತೆಗೆಯುವ ಸಂಕ್ರಮಣದ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಮಾಜಿಕ ಮಾಧ್ಯಮಗಳ ಭರಾಟೆ ಹೆಚ್ಚಿದ್ದು, ಶೇ.30 ರಷ್ಟು ಮಾತ್ರ ವಿಶ್ವಾಸಾರ್ಹತೆ ಇದು ಹೊಂದಿದೆ. ವಿದ್ಯುನ್ಮಾನ ಮಾಧ್ಯಮ ಶೇ.50 ಮತ್ತು ಮುದ್ರಣ ಮಾಧ್ಯಮ ಶೇ.63 ವಿಶ್ವಾಸಾರ್ಹತೆ ಹೊಂದಿದ್ದು, ಮುದ್ರಣ ಮಾಧ್ಯಮ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದ, ವಿಶ್ವಾಸಾರ್ಹತೆಯನ್ನು ಪತ್ರಕರ್ತರೇ ಉತ್ತಮ ಸುದ್ದಿಗಳನ್ನು ನೀಡುವ ಮೂಲಕ ಸಂಪಾದನೆ ಮಾಡಬೇಕೆಂದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್ ಮಂಜುನಾಥ್ ಮಾತನಾಡಿ, ಆಂಧ್ರಪ್ರದೇಶ ಮಾದರಿಯಲ್ಲಿ ಎಲ್ಲ ಪತ್ರಕರ್ತರಿಗೆ ಆರೋಗ್ಯ ಸವಲತ್ತುಗಳು ದೊರಕುವಂತಾಗಬೇಕು. ಪತ್ರಕರ್ತರ ಕ್ಷೇಮ ನಿಧಿ ಒಂದು ಸಮಿತಿ ರಚನೆಯಾಗಬೇಕು. ನಿವೃತ್ತಿ ನಂತರ ಆರೋಗ್ಯ ವಿಮೆಯಂತಹ ಸೌಲಭ್ಯ ನೀಡಬೇಕು. ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ಪತ್ರಕರ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಉಳಿಯಬೇಕು ಎಂದರು.

ಹಿರಿಯ ಪತ್ರಕರ್ತರಾದ ಗೋಪಾಲ್ ಎಸ್ ಯಡಗೆರೆ ಮಾತನಾಡಿ, ಇತ್ತೀಚೆಗೆ ಪತ್ರಿಕೋದ್ಯಮಿಗಳು ಹಣಕಾಸು ನಿರ್ವಹಣೆ ತಿಳಿಯದೆ ಸಂಕಷ್ಟಗಳನ್ನು ಎದುರುಸುತ್ತಿರುವುದನ್ನು ಕಾಣುತ್ತಿದ್ದೇವೆ. ನೈತಿಕ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಹಣಕಾಸು ನಿರ್ವಹಣೆ ಮತ್ತು ನೈತಿಕ ಮೌಲ್ಯಗಳ ಅಳವಡಿಕೆ ಬಗ್ಗೆ ತರಬೇತಿ ನೀಡುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಮಾತನಾಡಿ, ಮಾಧ್ಯಮ ಸ್ವಾತಂತ್ರ್ಯ ಪೂರ್ವದಿಂದಲೂ ಕಾಲಕ್ಕೆ ತಕ್ಕಂತೆ ಬೆಳೆಯುತ್ತಾ ಬಂದಿದ್ದು, ಪತ್ರಿಕೋದ್ಯಮ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ. ಪ್ರಸ್ತುತ ಜನರ ವಿಶ್ವಾಸ ಕೆಳೆದುಕೊಳ್ಳುವಂತಹ ಕೆಲ ಬೆಳವಣಿಗೆ ಆಗುತ್ತಿದ್ದು, ಇದು ಬದಲಾಗಬೇಕು ಎಂದರು. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸೌಲಭ್ಯವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಸ್‌ಎಲ್ ಮತ್ತು ಪಿಯುಸಿಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಅಭಿನಂದಿಸಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್‌ನ ಭಾರತದ ಸಂಚಾಲಕ ಹೆಚ್.ಬಿ.ಮದನಗೌಡ, ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಗಿರೀಶ್ ಕೋಟೆ ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಆರ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಬಂಡಿಗಡಿ ನಂಜುಂಡಪ್ಪ, ಪತ್ರಿಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Comment

error: Content is protected !!