Hosanagara | ಇಂದು ದೇಶದಲ್ಲಿ ವಾಹನ (Vehicles) ಸಂಖ್ಯೆ ಹೆಚ್ಚಾಗತೊಡಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಎರಡಕ್ಕೂ ಅಧಿಕ ವಾಹನಗಳಿದ್ದು ಪ್ರತಿಯೊಬ್ಬರು ವಾಹನ ಚಲಾಯಿಸುವವರೇ, ವಾಹನ ಚಲಾಯಿಸುವಾಗ ಜಾಗೃತಿಯಿಂದ ಹಾಗೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (Helmet) ಕಡ್ಡಾಯವಾಗಿ ಹಾಕಿರಬೇಕು ಹಾಗೂ ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಿಕೊಂಡು ವಾಹನ ಚಲಾಯಿಸಬೇಕೆಂದು ಹೊಸನಗರದ ಸಬ್ ಇನ್ಸ್ಪೆಕ್ಟರ್ ರಾಜುರೆಡ್ಡಿ ಹೇಳಿದರು.
ತಾಲ್ಲೂಕು ಜಯನಗರದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ವಾಹನ ಸವಾರರು 9 ತಿಂಗಳು ನಂತರದ ಮಕ್ಕಳನ್ನು ಬೈಕ್ ಹಿಂಭಾಗದಲ್ಲಿ ಕೂರಿಸಿಕೊಂಡು ಹೋಗುವಾಗ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲಿಸಬೇಕಾಗಿರುವುದು ನಿಮ್ಮ ಜವಾಬ್ದಾರಿ. ನೀವು ಸರ್ಕಾರಕ್ಕೆ, ಕಾನೂನುಗಳಿಗೆ ಹೆದರಿ ಹೆಲ್ಮೆಟ್ ಧರಿಸುವುದು ಸೂಕ್ತವಲ್ಲ. ನಿಮ್ಮ ಜೀವವನ್ನು ಉಳಿಸಿಕೊಳ್ಳಬೇಕಾದರೇ ಹೆಲ್ಮೆಟ್ ಸೀಟ್ ಬೆಲ್ಟ್ ಗಳನ್ನು ಹಾಕಿಕೊಂಡು ನಿಮ್ಮ ಜೀವ ಉಳಿಸಿಕೊಳ್ಳಿ ಎಂದರು.
ವಾಹನ ಚಲಾಯಿಸುವಾಗ ಮದ್ಯಪಾನ ಮಾಡಬೇಡಿ. ಇದು ಅಪರಾಧವಾಗಿದ್ದು ಶಿಕ್ಷೆಯಾಗಲಿದೆ. ಅದು ಅಲ್ಲದೇ ಅಪ್ರಾಪ್ತರ ಕೈಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ. ಇಂತಗ ಘಟನೆಗಳಿಗೆ ಪೋಷಕರ ಮೇಲೆ 25 ಸಾವಿರ ರೂ. ದಂಡ ಹಾಗೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬರು ಜಾಗೃತಿಯಿಂದ ವಾಹನ ಚಲಾಯಿಸಿ ಹಾಗೂ ಸುರಕ್ಷತೆಗಾಗಿ ನಿಮ್ಮ ಜೀವ ರಕ್ಷಣೆಗಾಗಿ ವಾಹನವನ್ನು ನಿಧಾನವಾಗಿ ಚಾಲಾಯಿಸಿ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಗಂಗಪ್ಪ, ಸುನೀಲ್, ಮಯಪ್ಪ, ರಂಜೀತ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.