ಮೆಸ್ಕಾಂ ನಿಯಮ ಗಾಳಿಗೆ ತೂರಿ ಎಲ್ಲೆಂದರಲ್ಲಿ ಲೈನ್ ಎಳೆದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ‌ ಗುತ್ತಿಗೆದಾರರು

Written by Malnadtimes.in

Published on:

WhatsApp Group Join Now
Telegram Group Join Now

ರಿಪ್ಪನ್‌ಪೇಟೆ: 11 ಕೆ.ವಿ. ಲೈನ್‌ನ ಮಾನದಂಡವೇನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮೆಸ್ಕಾಂ (Mescom) ಗುತ್ತಿಗೆದಾರರು ತಮ್ಮ ಕೆಲಸವಾದರೇ ಸಾಕು ಯಾರು ಏನಾದರೂ ಆಗಲಿ ನಮಗೆ ಬರಬೇಕಾದ ಗುತ್ತಿಗೆ ಬಾಬ್ತು ಕೈಗೆ ಸಿಕ್ಕರೆ ಸಾಕು ಎನ್ನುವರ ಸಂಖ್ಯೆಯೇ ಹೆಚ್ಚು ಎಂಬುದರಿಂದಾಗಿ ಮೆಸ್ಕಾಂ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಲೈನ್ ಎಳೆದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ.

ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಎರಡು ಸಂಪರ್ಕ ರಸ್ತೆಯ ಒಂದು ಕಿ.ಮೀ. ರಸ್ತೆ ಅಗಲೀಕರಣಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರ 4.85 ಕೋಟಿ ರೂ. ಅನುದಾನವನ್ನು ಅಂದಿನ ಶಾಸಕ ಹರತಾಳು ಹಾಲಪ್ಪನವರು ವಿಶೇಷ ಆಸಕ್ತಿ ವಹಿಸಿ ಅನುದಾನವನ್ನು ಬಿಡುಗಡೆ ಮಾಡಿಸುವ ಮೂಲಕ ಕಾಮಗಾರಿಗೆ ಶಂಕುಸ್ಥಾಪನೆ ನೀಡಲಾಗಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುವಂತಾಗಿದ್ದು ಇದರೊಂದಿಗೆ
ಸಾಗರ ರಸ್ತೆಯಲ್ಲಿ ಅಗಲೀಕರಣದೊಂದಿಗೆ ಡಿವೈಡರ್ ಮತ್ತು ಒಳಚರಂಡಿ ಕಾಮಗಾರಿ ಸಹ ಮಾಡುವ ಮೂಲಕ ವಿದ್ಯುತ್ ಕಂಬಗಳನ್ನು ಸಹ ಸ್ಥಳಾಂತರ ಮಾಡಲಾಗುತ್ತಾ ಬರಲಾಗಿದ್ದು ವಿನಾಯಕ ವೃತ್ತದ ಬಳಿಯಲ್ಲಿ ಖಾಸಗಿ ಪ್ರತಿಷ್ಟಿತ ವ್ಯಾಪಾರಿಯೊಬ್ಬರು ನ್ಯಾಯಾಲಯದ ಕಟ್ಟೆ ಏರಿದ್ದು ರಸ್ತೆ ಅಂಚಿನಲ್ಲಿ ಚರಂಡಿಯನ್ನು ಮುಟ್ಟದಂತೆ ನ್ಯಾಯಾಲಯದ ಸ್ಟೇ ಆರ್ಡರ್ ಇದೆ ಎಂದು ಹೇಳಿಕೊಳ್ಳುತ್ತಾ ಕಾಮಗಾರಿಗೆ ಅಡ್ಡಿಯಾಗಿದ್ದಾರೆ.

ಅಲ್ಲದೆ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಜಾಗಯಿಲ್ಲದೆ ಗುತ್ತಿಗೆದಾರ ಬೃಹತ್ ಎತ್ತರದ ನಾಲ್ಕು ವಿದ್ಯುತ್ ಕಂಬಗಳನ್ನು ತಂದು ರಸ್ತೆಯಂಚಿನಲ್ಲಿ ಹಾಕಲಾಗಿ ಸಾಗರ-ತೀರ್ಥಹಳ್ಳಿ ಸಂಪರ್ಕದ ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗುವ ಮೂಲಕ ವಾಹನ ಸಂಚಾರಕ್ಕೂ ಕಂಟಕವಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶದಿಂದಾಗಿ ತಕ್ಷಣ ಆ ಬೃಹತ್ ಕಂಬಗಳನ್ನು ಆ ಸ್ಥಳದಿಂದ ಸ್ಥಳಾಂತರ ಮಾಡಿದ್ದಾರೆ.

ಒಟ್ಟಾರೆಯಾಗಿ 11 ಕೆ.ವಿ.ಲೈನ್ ಮನೆಯ ಬಳಿ ಇರಬಾರದು ಆ ಲೈನ್‌ಗೂ ಮನೆಗೂ ಇಷ್ಟು ಅ ತರವಿರಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಗುತ್ತಿಗೆದಾರರಿಗೆ ಮತ್ತು ಮೆಸ್ಕಾಂ ಇಲಾಖೆಯವರಿಗೆ ಮಾತ್ರ ಯಾವುದೇ ಮಾನದಂಡದ ನಿಯಮ ಗೊತ್ತಿಲ್ಲದವರಂತೆ ಜಾಣಕುರುಡರಂತಾಗಿ ಯಾರು ಏನಾದರೂ ಆಗಲಿ ನಮ್ಮ ಕೆಲಸ ಅದರೆ ಸಾಕು ಎಂಬಂತಾಗಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವಂತಾಗಿದ್ದಾರೆ.

ಇಂದಲ್ಲ, ನಾಳೆ ಈ ರೀತಿಯಲ್ಲಿ ಅಳವಡಿಸಲಾದ ಲೈನ್ ಆಕಸ್ಮಿಕವಾಗಿ ತುಂಡಾಗಿ ಮನೆಗಳ ಮೇಲೆ ಬಿದ್ದು ಏನಾದರೂ ಅನಾಹುತ ಸಮಭವಿಸಿದರೆ ಅದಕ್ಕೆ ಹೊಣೆಗಾರರು ಯಾರು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡಿದೆ.

ಒಟ್ಟಾರೆಯಾಗಿ ಓರ್ವ ವ್ಯಕ್ತಿಯ ವ್ಯಾಪಾರ ವಹಿವಾಟಿಗಾಗಿ ಇಡೀ ಊರಿನ ಜನರನ್ನು ಧಿಕ್ಕರಿಸಿ ವಿದ್ಯುತ್ 11 ಕೆ.ವಿ.ಲೈನ್ ಸಂಪರ್ಕದ ಕಂಬವನ್ನು ಸ್ಥಳಾಂತರ ಮಾಡಲು ಹೊರಟಿರುವ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಮುಂದೆ ಏನು ಮಾಡುತ್ತಾರೆಂಬ ಬಗ್ಗೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

ಇನ್ನಾದರೂ ಮೆಸ್ಕಾಂ ಇಲಾಖೆ ಜಾಗೃತಗೊಂಡು ಇಲಾಖೆಯ ನಿಯಮಾನುಸಾರ 11 ಕೆ.ವಿ.ಲೈನ್ ಸ್ಥಳಾಂತರ ಮಾಡುವ ಮುನ್ನ ಯೋಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಾಗಿದೆ.

Leave a Comment

error: Content is protected !!