ರಿಪ್ಪನ್ಪೇಟೆ : ಪಟ್ಟಣದಲ್ಲಿ
ನಾಲ್ಕು ದಶಕಗಳ ಕಾಲ (ಕಿರಣ್ ಕ್ಲಿನಿಕ್) ಮೂಲಕ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಟಿ.ಆರ್. ಮಂಜುನಾಥ್ ರಾವ್ ಯಾನೆ ಕಿರಣ್ ಡಾಕ್ಟರ್ (84) ಅವರು ಬುಧವಾರ ತೀರ್ಥಹಳ್ಳಿಯ ಪುತ್ರನ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನವರಾದ ಇವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು 1972ರಲ್ಲಿ ರಿಪ್ಪನ್ಪೇಟೆಯಲ್ಲಿ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ವೃತ್ತಿ ಆರಂಭಿಸಿದರು.
ಬೆಳ್ಳೂರು, ಮಸ್ಕಾನಿ, ಬಸವಾಪುರ, ಅರಸಾಳು, ಹಾರೋಹಿತ್ತಲು, ಕಲ್ಲೂರು, ಜಂಬಳ್ಳಿ, ಚಿಕ್ಕಜೇನಿ, ಹೆದ್ದಾರಿಪುರ, ಹರತಾಳು, ಗರ್ತಿಕೆರೆ, ಕೋಡೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿನ ಜನರಿಗೆ ಬೈಸಿಕಲ್ ನಲ್ಲಿ ತೆರಳಿ ಕೇವಲ ಎರಡು ರೂ.ನಲ್ಲಿ ಚುಚ್ಚುಮದ್ದು ನೀಡುವ ಮೂಲಕ ಇವರು ಕಿರಣ್ ಡಾಕ್ಟರ್ ಎಂದೇ ಪ್ರಖ್ಯಾತಿ ಹೊಂದಿದ್ದರು.
ನಂತರ ಇವರ ಮಗ ಗಣೇಶ್ ನಾಯಕ್ ರವರು ತೀರ್ಥಹಳ್ಳಿಯಲ್ಲಿ ಕಿರಣ್ ಹೆಲ್ತ್ ಕೇರ್ ಎಂಬ ನರ್ಸಿಂಗ್ ಹೋಂ ಪ್ರಾರಂಭ ಮಾಡಿದ ತರುವಾಯ ಇವರು ವೈದ್ಯಕೀಯ ಸೇವೆಯಿಂದ ನಿವೃತ್ತಿ ಪಡೆದು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದು ವಿಶ್ರಾಂತಿ ಜೀವನ ನಡೆಸುತ್ತಿದ್ದರು.
ಇವರ ನಿಧನದಿಂದ ಇಂದು ರಿಪ್ಪನ್ಪೇಟೆ ಪ್ರಜಾವಾಣಿ ಓದುಗರ ವೇದಿಕೆ ಬಳಗದಿಂದ ಒಂದು ನಿಮಿಷದ ಮೌನಾಚರಣೆ ಜೊತೆಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.