ಕೊಪ್ಪ ; ಕಾಡಿನಲ್ಲಿ ಕಳೆದುಹೋಗಿದ್ದ ವೈದ್ಯರನ್ನು ಪೊಲೀಸ್ ಶ್ವಾನ ಸಹಾಯದಿಂದ ಪತ್ತೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಣವಂತೆ ಕಾಡಿನಲ್ಲಿ ನಡೆದಿದೆ.
ನವೆಂಬರ್ 2ರಂದು ವಿಹಾರಕ್ಕೆಂದು ಬಂದಿದ್ದ ವೈದ್ಯ ವೆಂಕಟೇಗೌಡ ದಾರಿ ತಪ್ಪಿ ಕಾಡು ಸೇರಿದ್ದರು. ಮರೆವಿನ ಕಾಯಿಲೆ ಇದ್ದ ಅವರಿಗೆ ವಾಪಸ್ ಬರಲು ಗೊತ್ತಾಗಿಲ್ಲ.

ಕಾಡಂಚಿನ ಗುಣವಂತೆ ಗ್ರಾಮದ ಮನೆಯೊಂದರಲ್ಲಿ ನೀರು ಕುಡಿದು ಹೋಗಿದ್ದ ಅವರು ನಾಲ್ಕು ದಿನ ಕಾಡಲ್ಲಿ ಸುತ್ತಾಡಿ ಕಾಡಲ್ಲೇ ಉಳಿದಿದ್ದರು.
ಮನೆಯವರು ಪೊಲೀಸರಿಗೆ ದೂರು ನೀಡಿ, ಕಾಡು-ಮೇಡು-ಹಳ್ಳಿ ಎಲ್ಲಾ ಹುಡುಕಿದ್ದರೂ ಎಲ್ಲೂ ಸಿಕ್ಕಿರಲಿಲ್ಲ. ಈ ವೇಳೆ ನಾಪತ್ತೆಯಾಗಿದ್ದ ವೆಂಕಟೇಗೌಡರ ಪಂಚೆ ಸಿಕ್ಕಿತ್ತು. ಅದರ ಜಾಡು ಹಿಡಿದು ಹೊರಟಿದ್ದ ಪೊಲೀಸ್ ಶ್ವಾನ 5 ಕಿ.ಮೀ. ದೂರದ ಕಾಡಿನಲ್ಲಿದ್ದ ವೈದ್ಯರನ್ನು ಪತ್ತೆ ಮಾಡಿದೆ.

ಗುಣವಂತೆ ಕಾಡಿನ ಆಳದ ಪ್ರದೇಶದಲ್ಲಿದ್ದ ಅವರನ್ನು ರಕ್ಷಣೆ ಮಾಡಲಾಗಿದೆ. ಪೊಲೀಸ್ ಶ್ವಾನದ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.







