ಶಿವಮೊಗ್ಗ ; ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳನ್ನೇ ಮಚ್ಚಿನಿಂದ ಕೊ*ಲೆಗೈದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾದ ದುರ್ಘಟನೆ ತಡರಾತ್ರಿ ನಡೆದಿದೆ.
ಜಿಲ್ಲಾ ಆಸ್ಪತ್ರೆಯ ನರ್ಸ್ ಕ್ವಾರ್ಟರ್ಸ್ನಲ್ಲಿ ನಡೆದ ಈ ಘಟನೆ ಇಡೀ ಬಡಾವಣೆಯನ್ನೇ ಶೋಕದಲ್ಲಿ ಮುಳುಗಿಸಿದೆ.
ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಮನೆಯಲ್ಲಿ ಘೋರ ಕೃತ್ಯ !
ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಾದ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ರಾಮಣ್ಣ ನಾಯಕ ಅವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ರಾಮಣ್ಣ ನಾಯಕ ಅವರ ಪತ್ನಿ ಶೃತಿ ಮತ್ತು 6ನೇ ತರಗತಿ ಮಗಳು ಪೂರ್ವಿಕಾ ಮೃತಪಟ್ಟವರು.
ರಾಮಣ್ಣ ನಾಯಕ ಅವರು ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದ ಕಾರಣ ಘಟನೆ ನಡೆದಾಗ ಮನೆಯಲ್ಲಿರಲಿಲ್ಲ. ಎಂದಿನಂತೆ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಕರೆದರೂ ಬಾಗಿಲು ತೆರೆಯದ ಕಾರಣ, ಅಕ್ಕಪಕ್ಕದ ನಿವಾಸಿಗಳ ಸಹಾಯದಿಂದ ಬಾಗಿಲನ್ನು ಮುರಿದು ಒಳ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಮಗಳು ಪೂರ್ವಿಕಾಳ ಮೃತದೇಹ ನೆಲದ ಮೇಲೆ ಬಿದ್ದಿದ್ದು, ಆಕೆಯ ಶವದ ಮೇಲೆಯೇ ನಿಂತು ತಾಯಿ ಶ್ರುತಿ ಅವರು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದರು. ಇದನ್ನು ಕಂಡು ರಾಮಣ್ಣ ನಾಯಕ ಅವರು ತೀವ್ರ ದಿಗ್ಭ್ರಾಂತಿಗೆ ಒಳಗಾಗಿದ್ದಾರೆ.
ವಿಡಿಯೋ ಕಾಲ್ನಲ್ಲಿ ಕೊನೆಯ ಮಾತು:
ಮೃತ ಶೃತಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇದಕ್ಕಾಗಿ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಅವರ ಮಾನಸಿಕ ಸ್ಥಿತಿ ಆಗಾಗ ಹದಗೆಡುತ್ತಿದ್ದು, ಮನೆಯಲ್ಲಿ ಘರ್ಷಣೆ ವಾತಾವರಣ ಉಂಟಾಗುತ್ತಿತ್ತು. ರಾತ್ರಿ ಪಾಳಿಯ ಕೆಲಸಕ್ಕೆ ರಾಮಣ್ಣ ನಾಯಕ ಹೋದ ನಂತರ, ರಾತ್ರಿ ಸುಮಾರು 10:30 ರ ಸುಮಾರಿಗೆ ಮಗಳು ಪೂರ್ವಿಕಾ ತಂದೆಗೆ ವಿಡಿಯೋ ಕಾಲ್ ಮಾಡಿದ್ದಾಳೆ. ‘ಅಪ್ಪ, ಅಮ್ಮ ಹೇಗೇಗೋ ಆಡುತ್ತಿದ್ದಾರೆ, ಬೇಗ ಮನೆಗೆ ಬಾ’ ಎಂದು ಕರೆದಿದ್ದಾಳೆ. ಅದಕ್ಕೆ ರಾಮಣ್ಣ ನಾಯಕ, ‘ಡ್ಯೂಟಿ ಮಾಡ್ತಾ ಇದ್ದೀನಿ ಮಗಳೇ, ಅಮ್ಮ ಸರಿಹೋಗ್ತಾರೆ, ಬೆಳಗ್ಗೆ ಬರ್ತೀನಿ’ ಎಂದು ಸಮಾಧಾನ ಹೇಳಿದ್ದಾರೆ. ದುರದೃಷ್ಟವಶಾತ್, ಇದೇ ತಂದೆ ಮತ್ತು ಮಗಳ ನಡುವಿನ ಕೊನೆಯ ಸಂಭಾಷಣೆಯಾಗಿದೆ. ಮನೆಯಲ್ಲಿ ಇದು ಸಾಮಾನ್ಯ ಎನ್ನುವಂತೆ ಸುಮ್ಮನಾಗಿದ್ದ ರಾಮಣ್ಣ ನಾಯಕ ಅವರಿಗೆ ಬೆಳಗ್ಗೆ ಈ ಭೀಕರ ದುರಂತ ಕಾದಿತ್ತು.
ಮಚ್ಚಿನಿಂದ ಹೊಡೆದು ಕೊಲೆ !
ಘಟನಾ ಸ್ಥಳಕ್ಕೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿಪಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 6ನೇ ತರಗತಿ ಓದುತ್ತಿದ್ದ ಮಗಳು ಪೂರ್ವಿಕಾಳ ತಲೆಗೆ ಮಚ್ಚಿನಿಂದ ಹೊಡೆದು ಸಾಯಿಸಿದ ಶೃತಿ, ನಂತರ ಅದೇ ಕೋಣೆಯಲ್ಲಿ ಮಗಳ ಶವದ ಮೇಲೇ ನಿಂತು ಆತ್ಮಹ*ತ್ಯೆ ಮಾಡಿಕೊಂಡಿರುವುದನ್ನು ಖಚಿತಪಡಿಸಿದರು. ತಾಯಿ ಶ್ರುತಿಗೆ ಮಾನಸಿಕ ಖಿನ್ನತೆ ಇತ್ತು ಎಂದು ಪತಿ ರಾಮಣ್ಣ ನಾಯಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.