Shikaripura | ಮುಜರಾಯಿ ಇಲಾಖೆ ಎಂದೊಡನೆ ಹಿಂದೂ ಧರ್ಮದ ದೇವಾಲಯಗಳ (Hindu Temples) ಸಂರಕ್ಷಣೆ, ಸಂಸ್ಕರಣೆ, ಪರಿವೀಕ್ಷಣೆ ಹೀಗೆ ಹತ್ತಾರು ರೀತಿಯ ಜವಾಬ್ದಾರಿ ಹೊಂದಿರುವ ಇಲಾಖೆ ಎಂದು ಪರಿಗಣಿಸಬಹುದು. ಈ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳನ್ನು ಎ ಬಿ ಸಿ ಎಂದು ಗುಂಪುಗಳಾಗಿ ವಿಂಗಡಿಸಲಾಗುತ್ತಿದ್ದು, ಇಲ್ಲಿ ಎ ಗುಂಪಿನ ದೇವಾಲಯಗಳೆಂದರೆ ತಾಲ್ಲೂಕು ಮಟ್ಟದಲ್ಲಿ ವಾರ್ಷಿಕ 25ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳು, ಬಿ ಗುಂಪಿನ ದೇವಾಲಯಗಳೆಂದರೆ ವಾರ್ಷಿಕ 10 ಲಕ್ಷಕ್ಕೂ ಹೆಚ್ಚಿನ ಆದಾಯವಿರುವ ದೇವಾಲಯಗಳು, ಸಿ ಗುಂಪಿನ ದವಾಲಯಗಳೆಂದರೆ ವಾರ್ಷಿಕ 5 ಲಕ್ಷಕ್ಕೂ ಕಡಿಮೆ ಆದಾಯವಿರುವ ದೇವಾಲಯಗಳು ಎಂದು ಪರಿಗಣಿಸಲಾಗುವುದು ಎಂಬ ಸರ್ಕಾರದ ಸುತ್ತೋಲೆ ಇರುತ್ತದೆ.
ತಾಲ್ಲೂಕಿನಲ್ಲಿ ಎ ಮತ್ತು ಸಿ ಗುಂಪನ್ನು ಹೊಂದಿರುವ ಒಟ್ಟು 39 ದೇವಾಲಯಗಳಿದ್ದು, ಈ ಪೈಕಿ ಎ ಗುಂಪಿನ ದೇವಾಲಯಗಳೆಂದರೆ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯ. ಇದರ ಸಮೀಪವಿರುವ ಶ್ರೀ ಕಾಶಿವಿಶ್ವನಾಥೇಶ್ವರ ದೇವಾಲಯವು ಸಿ ಗುಂಪಿನ ದೇವಾಲಯ ಎನ್ನಲಾಗುತ್ತಿದೆ. ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ವಾರ್ಷಿಕ 25 ಲಕ್ಷಕ್ಕೂ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದ್ದು, ಶ್ರೀ ಕಾಶಿವಿಶ್ವನಾಥೇಶ್ವರ ದೇವಸ್ಥಾನಕ್ಕೆ ವಾರ್ಷಿಕ 10 ಲಕ್ಷಕ್ಕೂ ಕಡಿಮೆ ಆದಾಯದ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ಎರಡೂ ದೇವಾಲಯಗಳಿಗೆ ಇತಿಹಾಸವಿದ್ದು, ಈ ದೇವಾಲಯಗಳಿಗೆ ಇಂದಿನವರೆಗೂ ಖಾಯಂ ಆದ ಅರ್ಚಕರಿಲ್ಲದಿರುವುದು ವಿಷಾಧನೀಯ ಸಂಗತಿಯಾಗಿದ್ದು, ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಒಬ್ಬರೇ ಒಬ್ಬರು ಉಪಾದಿವಂತಕರಿದ್ದಾರೆ. ಈ ಉಪಾದಿಮಂತಕರಿಗೆ ಪ್ರತೀ ತಿಂಗಳು ಅಲ್ಪ ಪ್ರಮಾಣದ ಹಣ ನೀಡಲಾಗುತ್ತಿದ್ದು, ಕಾಶಿವಿಶ್ವನಾಥೇಶ್ವರ ದೇಸ್ಥಾನದಲ್ಲಿ ಇಲ್ಲಿಯವರೆಗೂ ನಿಖರವಾದ ಅರ್ಚಕರಿಲ್ಲ ಎನ್ನಲಾಗಿದೆ.
ರಾಜ್ಯ ಮುಜರಾಯಿ ಇಲಾಖೆಯಿಂದ ಸರ್ಕಾರದ ಅಧೀನದಲ್ಲಿರುವ ದೇವಾಲಯಗಳಿಗೆ ತಾಲ್ಲೂಕು ಆಡಳಿತದಿಂದ ಆಯಾಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತೀ ವರ್ಷ ಹೋಮ ಹವನ ಪೂಜೆ ಅರ್ಚಕರಿಗೆ ಸಂಭಾವನೆ ಹೀಗೆ ಹಲವು ರೀತಿಯಲ್ಲಿ ಹಣ ಜಮಾವಾಗುತ್ತದೆ.
ಇತ್ತೀಚೆಗೆ ತಾಲ್ಲೂಕು ಆಡಳಿತವು ವರದಿಯನ್ನು ತಯಾರು ಮಾಡಿದ್ದು, ಆವರದಿಯ ಪ್ರಕಾರ ತಾಲ್ಲೂಕಿನಾದ್ಯಂತ ಮುಜುರಾಯಿ ಇಲಾಖೆಗೆ ಸೇರಿದ 39 ದೇವಸ್ಥಾನದ ಪೈಕಿ ಎ ಗುಂಪಿನ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ಒಂದಿದ್ದು, ಬಿ ಗುಂಪಿನ ದೇವಾಲಯವಿರುವುದಿಲ್ಲ. ಸಿ ಗುಂಪಿನ ದೇವಾಲಯಗಳೇ ಹಚ್ಚಾಗಿದ್ದು ಈ ಪೈಕಿ 7 ದೇವಾಲಯಗಳು ಅಸ್ಥಿತ್ವದಲ್ಲಿಲ್ಲ ಎಂಬ ವರದಿ ನೀಡಿರುವುದಾಗಿ ತಿಳಿದು ಬಂದಿದೆ. ಅವುಗಳೆಂದರೆ.
- ಉಡುಗಣಿ ಶ್ರೀರಾಮೇಸ್ವರಹನುಮಂತ ದೇವಾಲಯ
- ಉಡುಗಣಿ ಶ್ರೀಹಯಗ್ರೀವ ದೇವಾಲಯ
- ಗುಡ್ಡದಹೊಸಳ್ಳಿ ಶ್ರೀಗಂಗಾಧರಹನುಮಂತ ದೇವಾಲಯ
- ಶಿಕಾರಿಪುರ ಪಟ್ಟಣದ ಶ್ರೀಪೇಟೆರಂಗನಾಥ ದೇವಾಲಯ
- ಪಟ್ಟಣದ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯ
- ಪಟ್ಟಣದ ಶ್ರೀಪೇಟೆ ಕೇಶವದೇವಾಲಯ
- ಪಟ್ಟಣದ ಶ್ರೀಬೆಳಂದೂರು ಕಟ್ಟೆ ಆಂಜನೇಯ
ದೇವಾಲಯ ಹೀಗೆ ಒಟ್ಟು 7 ದೇವಾಲಯಗಳು ಅಸ್ಥಿತ್ವದಲ್ಲಿಲ್ಲ ಎಂಬುದಾಗಿ ಮಾಹಿತಿ ದೊರೆತ್ತಿದ್ದು, ಇಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟ ದೇವಾಲಯಗಳು ಅವರ ಮೇಲುಸ್ತುವಾರಿ ಇದ್ದಾಗಿಯೂ ಸಹ ಅಸ್ಥಿತ್ವದಲ್ಲಿರುವುದಿಲ್ಲವೆಂದು ಮಾಹಿತಿ ನೀಡಿದರೆ ಇಲಾಖೆಯ ವೈಫಲ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ಪೇಟೆ ರಂಗನಾಥ ದೇವಾಲಯ ಎಂಬುದು ಬೆರಳಚ್ಚಿನ ಅಥವಾ ಉಚ್ಛಾರಣೆಯಿಂದ, ಆರಂಭದ ಮೊದಲಕ್ಷರದ ತಪ್ಪಿನಿಂದ ದೇವಾಲಯ ಅಸ್ಥಿತ್ವದಲ್ಲಿಲ್ಲ ಎಂಬುದಾಗಿ ಹೇಳಲಾಗುತ್ತಿದ್ದು, ಇಲ್ಲಿ ಪೇ ಎಂಬ ಅಕ್ಷರದ ಬದಲು ಭೇ ಎಂಬ ಅಕ್ಷರ ಸೇರಿಸಿದರೆ ಬೇಟೆ ರಂಗನಾಥ ದೇವಾಲಯವಾಗುವುದು. ಈ ಬೇಟೆ ರಂಗನಾಥ ದೇವಾಲಯವು ಐತಿಹಾಸಿಕ ದೇವಾಲಯವಾಗಿದ್ದು, ಈ ದೇವಸ್ಥಾನವು ಪಟ್ಟಣದ ಸರ್ಕಾರಿ ಪದವಿಪೂರ್ವ (ಜೂನಿಯರ್) ಕಾಲೇಜಿನಲ್ಲಿದೆ.
ಪಟ್ಟಣದಲ್ಲಿ ಇನ್ನೊಂದು ದೇವಾಲಯವೆಂದರೆ ಶ್ರೀಪೇಟೆ ಕೇಶವದೇವಾಲಯ ಈ ದೇವಾಲಯವು ದೊಡ್ಡಪೇಟೆಯಲ್ಲಿರುವ ಚಿಕ್ಕಬ್ರಾಹ್ಮಣಕೇರಿಯ ಹಿಂದೆ ಇತ್ತು ಎಂಬ ಮಾಹಿತಿ ಮೇರಿಗೆ ಸ್ಥಳ ಪರಿಶೀಲಿಸಿದಾಗ ಇಲ್ಲಿ ಹೊಡೆದು ಹಾಳಾಗಿರುವ ಚಿಕ್ಕ ಗೋಪುರ ಹಾಗೂ ಮೂರ್ತಿ ಕಾಣಬಹುದಲ್ಲದೇ, ಇದಕ್ಕೆ ಸಂಬಂದಿಸಿದಂತೆ ಒಂದು ಬಾವಿ ಇತ್ತು ಎನ್ನಲಾಗುತ್ತಿದ್ದು, ಈ ದೇವಸ್ಥಾನದ ಸುತ್ತಲಿನ ಜಾಗವು ಒತ್ತುವರಿಯಾದಂತೆ ಕಂಡು ಬರುತ್ತದೆ. ಸಮೀಪದ ಕೆಲ ಸ್ಥಳೀಯರ ಬಳಿ ಮಾಹಿತಿ ಸಂಗ್ರಹಿಸಿದರೆ ಇದರ ಪತ್ತೆ ಹಚ್ಚಲು ಸುಲಭವಾಗುವುದು.
ಅಸ್ಥಿತ್ವದಲ್ಲಿಲ್ಲ ಎಂದು ಹೇಳುವುದು ಸುಲಭವಾಗಿದ್ದು, ಸೂಕ್ಷ್ಮತೆಯಿಂದ ಎಚ್ಚರಿಕೆಯಿಂದ ದೇವಾಲಯಗಳ ಶೋಧನೆ ನಡೆಸಿದರೆ ದೇವಾಲಯಗಳನ್ನು ಪತ್ತೆಹಚ್ಚಿ ಬಯಲಿಗೆ ತರಬಹುದು. ಒಂದು ವೇಳೆ ಇಲಾಖೆಯು ಅಸ್ಥಿತ್ವದಲ್ಲಿಲ್ಲವೆಂದು ಹೇಳುವುದಾದರೆ, ದೇವಾಲಯದಲ್ಲಿದ್ದ ಬೆಲೆ ಬಾಳುವಂತಹ ಮೂರ್ತಿಗಳು ಕಳ್ಳಕಾಕರ ಪಾಲಾಯಿತೇ? ತಜ್ಞರ ಪ್ರಕಾರ ಇದರಲ್ಲಿ ಅನೇಕ ದೇವಾಲಯಗಳು ವೈಷ್ಣವಪಂಥದ ದೇವಾಲಯಗಳಾಗಿದ್ದು, ಈದೇವಾಲಯದ ದೇವರುಗಳ ಅಲಂಕಾರಕ್ಕೆಂದಿದ್ದ ಚಿನ್ನ-ಬೆಳ್ಳಿಗಳಂತಹಾ ಆಭರಣಗಳ ಪಾಡೇನು? ಈ ದೇವಾಲಯಗಳಿಗೆ ಸಂಬಂಧಿಸಿದ ಆಸ್ಥಿ-ಪಾಸ್ಥಿಗಳ ಪಾಡೇನು? ಬಳ್ಳಿಗಾವಿಯ ಶ್ರೀ ಅನಂತಪದ್ಮನಾಭ ದೇವಾಲಯವೇ ಇಲ್ಲ. ಈ ದೇವಾಲಯದ ಮೂರ್ತಿಯು ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಮದ ವಸ್ತು ಸಂಗ್ರಹದಲ್ಲಿದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದ್ದು, ಆದರೂ ಇಲಾಖೆಯವರು ಈ ದೇವಸ್ಥಾನ ಅಸ್ಥಿತ್ವದಲ್ಲಿದೆ ಎಂಬ ಮಾಹಿತಿ ನೀಡಿರುತ್ತಾರೆ. ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುವಂತಹಾ ಈ ಸಂದರ್ಭದಲ್ಲಿ ಅಸ್ಥಿತ್ವದಲ್ಲಿಲ್ಲ ಎಂಬುದಾಗಿ ಮಾಹಿತಿ ನೀಡುವ ಇಲಾಖೆಗೆ ಏನೆಂದು ಹೇಳಬೇಕು.
ಇದೇ ರೀತಿಯಲ್ಲಿ ಮುಜರಾಯಿ ಇಲಾಖೆ ದೇವಾಲಯಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದೊಂದು ದಿನ ದೇವಾಲಯಗಳ ಮೂಲವೇ ನಶಿಸಿ ಹೋಗುವುದರಲ್ಲಿ ಸಂದೇಹವಿಲ್ಲ. ದೇವಾಲಯಗಳ ಆಸ್ಥಿಪಾಸ್ಥಿ ಪರರ ಪಾಲಾಗುವುದರಲ್ಲಿ ಸಂದೇಹವಿಲ್ಲ. ಮುಜರಾಯ ಇಲಾಖೆಯವರೇ ಈ ದೇವಾಲಯಗಳನ್ನು ತಮ್ಮ ಆಸ್ಥಿಯೆಂದು ತಮ್ಮ ವ್ಯಾಪ್ತಿಗೆ ಒಳಪಡಿಸಿಕೊಂಡಿದ್ದಾಗಯೂ, ಈಗ ಅಸ್ಥಿತ್ವದಲ್ಲಿಲ್ಲ ಎಂದಾದರೆ ಜನಸಾಮಾನ್ಯರ ಆಸ್ಥಿಗಳ ಪಾಡೇನು? ಶಿಕಾರಿಪುರ ತಾಲ್ಲೂಕಿನಲ್ಲಿಯೇ 7 ದೇವಾಲಯಗಳು ಅಸ್ಥಿತ್ವದಲ್ಲಿಲ್ಲ ಎಂದಾದರೆ, ಜಿಲ್ಲೆಯ ಹಾಗೂ ರಾಜ್ಯದಲಿರುವಂತಹಾ ದೇವಾಲಯಗಳ ಪಾಡೇನು ಎಂಬುದು ಸಾರ್ವಜನಿಕರಲ್ಲಿ ಸಂಶಯಮೂಡಿದೆ.
ಇನ್ನಾದರೂ ಇಲಾಖೆಯಾಗಲಿ, ಪುರಾತತ್ವ ಇಲಾಖೆಯಾಗಲಿ, ಸರ್ಕಾರವಾಗಲಿ ಎಚ್ಚೆತ್ತು ಎಲ್ಲಾ ದೇವಾಲಯಗಳ ಬಗ್ಗೆ ಗಮನ ಹರಿಸಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂ ಪರ ಸಂಘಟನೆಗಳು, ದೇವಾಲಯಗಳ ಸಂರಕ್ಷಣೆಗಳಂತಹಾ ಹಾಗೂ ವಿವಿಧ ರೀತಿಯ ಸಂಘಟಕರು ಈ ಬಗ್ಗೆ ಹೋರಾಟದ ಹಾದಿ ಹಿಡಿಯುವುದರಲ್ಲಿ ಸಂಶಯವಿಲ್ಲ.
ವರದಿ : ರಾಜಾರಾವ್ ಎಂ ಜಾಧವ್, ಶಿಕಾರಿಪುರ