ಎತ್ತಿನ ಬಂಡಿ ಮತ್ತು ಕುದುರೆ ಮೇಲೆ ಪ್ರಯಾಣ ಮಾಡಬೇಕಾದಂತಹ ದಿನಗಳು ಬಹಳ ದೂರವಿಲ್ಲ ; ಡಾ. ಆರ್.ಸಿ. ಜಗದೀಶ್

Written by Malnadtimes.in

Published on:

WhatsApp Group Join Now
Telegram Group Join Now

SAGARA | ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮುಖ್ಯ ಆವರಣದಲ್ಲಿ ಮಂಗಳವಾರ ವಿಶ್ವ ಜೈವಿಕ ಇಂಧನ ದಿನಾಚರಣೆ ಮತ್ತು ವನಮಹೋತ್ಸವ ಅಂಗವಾಗಿ ಬದು ಮತ್ತು ಬೇಲಿಗೂಟ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜೈವಿಕ ಇಂಧನ ಉದ್ಯಾನದಲ್ಲಿ ವಿವಿಧ ಜೈವಿಕ ಇಂಧನ ಗಿಡಗಳನ್ನು ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಗೌರವಾನ್ವಿತ ಕುಲಪತಿ ಡಾ. ಆರ್.ಸಿ ಜಗದೀಶ್, ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗದ ಇಂಧನವನ್ನು ಅವಶ್ಯಕತೆ ಮೀರಿ ಉಪಯೋಗಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಕ್ಷಾಮ ಉಂಟಾಗಿ ಮುಂದಿನ ಪೀಳಿಗೆಯು ಎತ್ತಿನ ಬಂಡಿ ಮತ್ತು ಕುದುರೆಯ ಮೇಲೆ ಪ್ರಯಾಣ ಮಾಡಬೇಕಾದಂತಹ ದಿನಗಳು ಬಹಳ ದೂರ ಇಲ್ಲ. ಆದ್ದರಿಂದ ನವೀಕರಿಸಬಹುದಾದ ಜೈವಿಕ ಇಂಧನವನ್ನು ಹಂತ ಹಂತವಾಗಿ ಉಪಯೋಗಿಸುವುದರ ಮೂಲಕ ನವೀಕರಿಸಲಾಗದ ಇಂಧನಗಳ ಮೇಲೆ ಅವಲಂಬನೆಯನ್ನು ತಗ್ಗಿಸಬಹುದು. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜೈವಿಕ ಇಂಧನದ ಉಪಯೋಗ ತುಂಬಾ ಕಡಿಮೆ ಇದ್ದು, ಇದರ ಪ್ರಮಾಣವನ್ನು ಹೆಚ್ಚಿಸಲು ಹೆಚ್ಚು ಹೆಚ್ಚು ಜೈವಿಕ ಇಂಧನ ಸಸಿಗಳನ್ನು ನೆಡಲು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯವು ಪ್ರಸ್ತುತ ವರ್ಷದಲ್ಲಿ ಸುಮಾರು ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ‌. ಅಲ್ಲದೇ, ಕೃಷಿ ಸಾವಯುವ ವಸ್ತುಗಳು ಹಾಗೂ ಮನೆಯ ಅನುಪಯುಕ್ತ ತ್ಯಾಜ್ಯ ವಸ್ತುಗಳಿಂದ ಜೈವಿಕ ಇಂಧನವನ್ನು ತಯಾರಿಸಬಹುದಾಗಿದೆ ಎಂದರು.

ಸ್ವಾಭಾವಿಕ ಕಾಡಿನಿಂದ ಅಡಿಕೆ ತೋಟಕ್ಕೆ ಬದಲಾವಣೆಗೊಂಡ ಪ್ರದೇಶದಲ್ಲಿ ಬರೀ ಒಂದೇ ಜಾತಿಯ ಸಸ್ಯಗಳಿಗೆ ಮೊರೆ ಹೋಗದೆ ಬೇರೆ, ಬೇರೆ ಜಾತಿಯ ಸಸ್ಯ ಪ್ರಭೇದವನ್ನು ನೆಡಬೇಕು. ಹಾಗೆಯೇ ವನಮಹೋತ್ಸವ ಎಂಬುದು ಒಂದು ದಿನಕ್ಕೆ ಸೀಮಿತವಾಗದೇ ವರ್ಷವಿಡಿ ಗಿಡ ಪೋಷಿಸುವಂತಾಗಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಜೈವಿಕ ಇಂಧನ ಉದ್ಯಾನ ಯೋಜನೆಯ ಪ್ರಧಾನ ಸಂಶೋದಕ ಡಾ.ಹೊನ್ನಪ್ಪ ಹೆಚ್‌.ಎಂ. ಜೈವಿಕ ಇಂಧನ ದಿನಾಚರಣೆ ಹಿನ್ನೆಲೆ ಮತ್ತು ಜೈವಿಕ ಇಂಧನದ ತಯಾರಿಕೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 30 ಕೃಷಿ ಸಖಿಯರು, ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್ ರಾದ ಡಾ. ಎಸ್.ಯು. ಪಾಟೀಲ್, ಡಾ. ನಾರಾಯಣ್. ಎಸ್. ಮಾರ್ವಕರ್, ಕುಲಸಚಿವರಾದ ಡಾ. ಶಶಿಧರ್ ಕೆ.ಸಿ ಮತ್ತಿತರರು ಭಾಗಿಯಾಗಿದ್ದರು.

ಈ ಕಾರ್ಯಕ್ರವನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃಧ್ಧಿ ಮಂಡಳಿ ಬೆಂಗಳೂರು, ಜೈವಿಕ ಇಂಧನ ಉದ್ಯಾನ ಯೋಜನೆ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಅಖಿಲ ಭಾರತ ಕೃಷಿ ಅರಣ್ಯ ಸಂಘಟಿತ ಸಂಶೋಧನಾ ಯೋಜನೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

Leave a Comment

error: Content is protected !!